ಬೆಂಗಳೂರು: ಹುಬ್ಬಳ್ಳಿ ನಗರದಲ್ಲಿರುವ ಎಂ ಟಿ ಎಸ್ ಬಡಾವಣೆಯಲ್ಲಿ ಸುಮಾರು 1,360 ಕೋಟಿ ರೂಪಾಯಿ ಮೌಲ್ಯದ 13 ಎಕರೆ ಜಮೀನನ್ನು ಕೇವಲ 83 ಕೋಟಿ ರೂಪಾಯಿಗೆ ಗುತ್ತಿಗೆ ನೀಡುತ್ತಿರುವುದನ್ನು ಖಂಡಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಈ ವಿಚಾರದ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿಯವರು ಮೌನ ವಹಿಸಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ.
ಹುಬ್ಬಳ್ಳಿಯ ಎಂಟಿಎಸ್ ನಗರದಲ್ಲಿರುವ 1,360 ಕೋಟಿ ಮೌಲ್ಯದ 13 ಎಕರೆ ರೈಲ್ವೆ ಜಮೀನನ್ನು 83 ಕೋಟಿಗೆ ಗುತ್ತಿಗೆಗೆ ಕೊಡಲು ಹೊರಟಿರುವುದರ ಹಿಂದಿರುವ ಷಡ್ಯಂತ್ರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕರು ಏಕೆ ಮೌನ ವಹಿಸಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಪ್ರಶ್ನಿಸಿದರು.
ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ಜಮೀನು ಗುತ್ತಿಗೆ ಪ್ರಕ್ರಿಯೆ ಸಂಶಯಾಸ್ಪದವಾಗಿದೆ. 30 ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಗುತ್ತಿಗೆ ನೀಡಲು ಅವಕಾಶವಿಲ್ಲ. 99 ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡುತ್ತಿರುವುದರ ಹಿಂದಿನ ಉದ್ದೇಶವೇನು? ಇದೂ ಶೇಕಡ 40ರಷ್ಟು ಕಮಿಷನ್ ದಂಧೆಯ ಮುಂದುವರಿದ ಭಾಗವೆ ಎಂದು ಕೇಳಿದರು.
ಇದು ರಾಜ್ಯದ ಜನರ ಆಸ್ತಿ. ಈಗ ತಾತ್ಕಾಲಿಕವಾಗಿ ಬಿಡ್ ಪ್ರಕ್ರಿಯೆ ಸ್ಥಗಿತಗೊಳಿಸಿದ್ದಾರೆ. ಈ ಹಗರಣದ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಕೂಡ ಮಾತನಾಡಲಿ ಎಂದು ಆಗ್ರಹಿಸಿದರು. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ, ಕರ್ನಾಟಕವನ್ನು ಪ್ರತಿನಿಧಿಸುವ ಇತರ ಸಚಿವರು, ಪ್ರಧಾನಿ ಏಕೆ ಈ ವಿಚಾರದಲ್ಲಿ ಮೌನಕ್ಕೆ ಶರಣಾಗಿದ್ದಾರೆ? ಕೇಂದ್ರ ರೈಲ್ವೆ ಸಚಿವರು ಏಕೆ ಮಾತನಾಡುತ್ತಿಲ್ಲ? ಎಲ್ಲರೂ ಈ ಬಗ್ಗೆ ಕರ್ನಾಟಕದ ಜನರಿಗೆ ಉತ್ತರಿಸಲಿ ಎಂದರು..