ಬೆಂಗಳೂರು: ಮಳವಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಡಾನೆ ಹಾಗೂ ಚಿರತೆಗಳ ಹಾವಳಿ ಹೆಚ್ಚಾಗುತ್ತಿದ್ದು, ಜನವಸತಿ ಪ್ರದೇಶಗಳಿಗೆ ವನ್ಯಜೀವಿಗಳು ನುಗ್ಗದಂತೆ ತಡೆಯಲು ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮತ್ತು ಚಿರತೆ ಕಾರ್ಯಪಡೆ ರಚನೆಗೆ ಸರ್ಕಾರ ಮುಂದಾಗಿದೆ.
ಗುರುವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಮಳವಳ್ಳಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅವರು ಈ ವಿಷಯವನ್ನು ಪ್ರಸ್ತಾಪಿಸಿ, ಕಾವೇರಿ ನದಿ ತೀರದ ಮಳವಳ್ಳಿ ಮತ್ತು ಕನಕಪುರ ಭಾಗದಲ್ಲಿ ಆನೆಗಳ ಹಾವಳಿ ವಿಪರೀತವಾಗಿದೆ. ರೈಲ್ವೆ ಬ್ಯಾರಿಕೇಡ್ ಮತ್ತು ಸೋಲಾರ್ ಟೆಂಟಕಲ್ ಫೆನ್ಸಿಂಗ್ ಹಾಕದಿದ್ದರೆ ರೈತರ ಬೆಳೆ ಹಾನಿ ತಪ್ಪಿಸಲು ಸಾಧ್ಯವಿಲ್ಲ ಎಂದು ಸದನದ ಗಮನ ಸೆಳೆದರು. ಅಲ್ಲದೆ, ಕಳೆದ ಮೂರು ವರ್ಷಗಳಿಂದ ಈ ಭಾಗದಲ್ಲಿ ಆರ್‌ಎಫ್‌ಒ (RFO) ಹುದ್ದೆಗಳು ಖಾಲಿಯಿದ್ದು, ತಕ್ಷಣ ನೇಮಕಾತಿ ಮಾಡುವಂತೆ ಆಗ್ರಹಿಸಿದರು.
ಸಚಿವ ಈಶ್ವರ ಖಂಡ್ರೆ ಪ್ರತಿಕ್ರಿಯೆ:
ಶಾಸಕರ ಪ್ರಶ್ನೆಗೆ ಉತ್ತರಿಸಿದ ಅರಣ್ಯ ಸಚಿವ ಈಶ್ವರ ಖಂಡ್ರೆ, ರಾಜ್ಯಾದ್ಯಂತ ಆನೆಗಳ ಹಾವಳಿ ತಡೆಗೆ ಪ್ರಸಕ್ತ ವರ್ಷ ಸುಮಾರು 201 ಕೋಟಿ ರೂ. ವೆಚ್ಚದಲ್ಲಿ 116 ಕಿ.ಮೀ. ಉದ್ದದ ರೈಲ್ವೆ ಬ್ಯಾರಿಕೇಡ್ ನಿರ್ಮಿಸಲು ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.
ಸಚಿವರ ಉತ್ತರದಲ್ಲಿನ ಮುಖ್ಯಾಂಶಗಳು:
- ಮಳವಳ್ಳಿ ಕ್ಷೇತ್ರಕ್ಕೆ ಅನುದಾನ: ಮಳವಳ್ಳಿ ಭಾಗದಲ್ಲಿ 5.5 ಕಿ.ಮೀ. ಉದ್ದದ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಈಗಾಗಲೇ 9.38 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಕಾಮಗಾರಿ ಶೀಘ್ರವೇ ಆರಂಭವಾಗಲಿದೆ.
- ಆಧುನಿಕ ತಂತ್ರಜ್ಞಾನ: ವನ್ಯಜೀವಿಗಳ ಚಲನವಲನ ಗಮನಿಸಲು ಡ್ರೋನ್ ಕ್ಯಾಮೆರಾ, ಎಲಿಫೆಂಟ್ ಟಾಸ್ಕ್ ಫೋರ್ಸ್ ಹಾಗೂ ಕಮಾಂಡ್ ಸೆಂಟರ್‌ಗಳನ್ನು ಬಳಸಲಾಗುತ್ತಿದೆ.
- ಚಿರತೆ ಕಾರ್ಯಪಡೆ: ಚಿರತೆಗಳ ಹಾವಳಿ ಹೆಚ್ಚಾಗಿರುವ ಕಡೆ ಪ್ರತ್ಯೇಕ ಕಾರ್ಯಪಡೆ ಹಾಗೂ ವಾಹನ ಸೌಲಭ್ಯ ಒದಗಿಸಲು ಸರ್ಕಾರ ಬದ್ಧವಾಗಿದೆ.
- ಹುದ್ದೆಗಳ ಭರ್ತಿ: ಖಾಲಿ ಇರುವ ಆರ್‌ಎಫ್‌ಒ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಮಾನವ-ವನ್ಯಜೀವಿ ಸಂಘರ್ಷ ತಡೆಗೆ ಸರ್ಕಾರ ಮೊದಲ ಆದ್ಯತೆ ನೀಡಿದ್ದು, ಅಗತ್ಯವಿರುವ ಕಡೆಗಳಲ್ಲಿ ಹೆಚ್ಚಿನ ರೈಲ್ವೆ ಬ್ಯಾರಿಕೇಡ್ ಅಳವಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…








