ರಾಯಚೂರು : ಸಾಮಾನ್ಯವಾಗಿ ಕಳ್ಳರು ಮನೆಯಲ್ಲಿ ಯಾರು ಇಲ್ಲದೆ ಇದ್ದಾಗ ಬೀಗ ಹಾಕಿದ ಮನೆಗೆ ಕನ್ನ ಹಾಕಿ ನಗದು ಚಿನ್ನಾಭರಣ ಕಳ್ಳತನ ಮಾಡುವುದನ್ನು ಕೇಳಿದ್ದೇವೆ, ನೋಡಿದ್ದೇವೆ. ಆದರೆ ಇಲ್ಲಿ ಭಕ್ತರ ಸೋಗಿನಲ್ಲಿ ಬಂದು ಮಠಾಧೀಶರಿಗೆ ಹೆದರಿಸಿ ಲಕ್ಷಾಂತರ ರೂಪಾಯಿ ಚಿನ್ನ, ನಗದನ್ನು ದೋಚಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂರಿನಲ್ಲಿ ನಡೆದಿದೆ.
ಹೌದು ಭಕ್ತರ ಸೋಗಿನಲ್ಲಿ ಬಂದು ಚಿತ್ತರಗಿ ವಿಜಯ ಮಹಾಂತೇಶ್ವರ ಶಾಖಾ ಮಠದ ಪೀಠಾಧಿಪತಿಗೆ ಹೆದರಿಸಿ ಚಿನ್ನಾಭರಣ, ನಗದು ಸೇರಿದಂತೆ ಸುಮಾರು 35 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ದರೋಡೆ ಮಾಡಿದ ಘಟನೆ ಲಿಂಗಸುಗೂರಿನಲ್ಲಿ ನಡೆದಿದೆ.
ಪಟ್ಟಣದ ಬಸವಸಾಗರ ರಸ್ತೆಯಲ್ಲಿರುವ ಮಠದ ಸಿದ್ಧಲಿಂಗ ಸ್ವಾಮೀಜಿಗಳಿಗೆ ಹೆದರಿಸಿ ಸುಲಿಗೆಕೋರರು 20 ರಿಂದ 25 ಲಕ್ಷ ರೂ. ನಗದು, 80 ಗ್ರಾಂ ಚಿನ್ನಾಭರಣ, 7 ಕೆ.ಜಿ ಬೆಳ್ಳಿ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.ಭಕ್ತರ ಸೋಗಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು, ಕಲಬುರಗಿಯಿಂದ ಬಂದಿದ್ದೇವೆ. ರಾತ್ರಿ ಮಠದಲ್ಲಿ ಆಶ್ರಯ ಕೊಡಿ ಎಂದು ಕೇಳಿದ್ದಾರೆ.
ಬಳಿಕ ನೀರು ಕೇಳುವ ನೆಪದಲ್ಲಿ ನಡುರಾತ್ರಿ ಸ್ವಾಮಿಜಿ ಕೋಣೆ ಬಾಗಿಲು ತೆಗೆಸಿ ಸುಲಿಗೆ ಮಾಡಿದ್ದಾರೆ.ಪಿಸ್ತೂಲ್ ರೀತಿಯ ಆಯುಧ ಹಿಡಿದು ಬೆದರಿಸಿ ಸುಲಿಗೆ ಮಾಡಿದ್ದಾರೆ ಎಂದು ಸ್ವಾಮೀಜಿ ಆರೋಪಿಸಿದ್ದಾರೆ.ಈ ಸಂಬಂಧ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.