ಬೆಂಗಳೂರು : ಅನಾರೋಗ್ಯದ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದ ಶಿವರಾಜ್ ಕುಮಾರ್ ಅವರು ಚಿಕಿತ್ಸೆ ಪಡೆದು ಗುಣಮುಖರಾಗಿ ಬೆಂಗಳೂರಿಗೆ ಇಂದು ವಾಪಸ್ಸಾಗಿದ್ದಾರೆ. ವಿಮಾನ ನಿಲ್ದಾಣದಲ್ಲಿ ಸಿನಿಮಾ ಸೆಲೆಬ್ರಿಟಿಗಳು, ಆಪ್ತರು ಶಿವಣ್ಣ ಅವರನ್ನು ಸ್ವಾಗತಿಸಿದ್ದಾರೆ. ವಿಮಾನ ನಿಲ್ದಾಣದಿಂದ ಹೊರಬರುತ್ತಲೇ ಎಲ್ಲರೆಡೆ ಮುಗುಳ್ನಗುತ್ತಾ ಕೈಬೀಸಿದ ಶಿವಣ್ಣ, ತಮ್ಮ ಸ್ವಾಗತಕ್ಕೆ ಆಗಮಿಸಿದವರನ್ನು ತಬ್ಬಿ ಸಂತಸ ಪಟ್ಟರು.
ವಿಮಾನ ನಿಲ್ದಾಣದ ಬಳಿಯ ಟೋಲ್ ಗೇಟ್ನಲ್ಲಿ ಅಭಿಮಾನಿಗಳು ಶಿವಣ್ಣನಿಗೆ ಸೇಬು ಹಣ್ಣಿನ ಹಾರ ಹಾಕಿ ಅದ್ಧೂರಿಯಾಗಿ ಸ್ವಾಗತ ಮಾಡಿದ್ದಾರೆ. ಶಿವಣ್ಣ ಸಹ ಕಾರು ನಿಲ್ಲಿಸಿ ಅಭಿಮಾನಿಗಳು ಸ್ವಾಗತ ಸ್ವೀಕರಿಸಿದ್ದಾರೆ. ಸ್ವಾಗತ ಮಾಡಿದ ಅಭಿಮಾನಿಗಳಿಗೆ ಧನ್ಯವಾದ ಹೇಳಿ, ಮಾನ್ಯತಾ ಟೆಕ್ ಪಾರ್ಕ್ ನ ಮನೆಗೆ ಆಗಮಿಸಿದ್ದಾರೆ.
ಇನ್ನು ಶಸ್ತ್ರ ಚಿಕಿತ್ಸೆ ಯಶಸ್ವಿಯಾದ ಬಳಿಕ ನಟ ಶಿವರಾಜ್ ಕುಮಾರ್ ಬೆಂಗಳೂರಿಗೆ ಆಗಮಿಸಿದ ವಿಷಯ ತಿಳಿದು ಸಹೋದರ ರಾಘವೇಂದ್ರ ರಾಜಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಕೊನೆಗೂ ಈ ದಿನ ಬಂದಿತು ನನಗೆ ಅಪ್ಪಾಜಿ ಕಾಡಿನಿಂದ ವಾಪಸ್ ಬಂದಂತೆ ಆಯಿತು. ಶಿವಣ್ಣನನ್ನು ನೋಡಿ ನನಗೆ ಅಪ್ಪಾಜಿ ನೋಡಿದಂತೆ ಆಯ್ತು. ನನ್ನ ಆಯಸ್ಸು ಕೂಡ ಶಿವಣ್ಣಗೆ ಇರಲಿ. ಶಿವಣ್ಣನಿಗೆ ನಾವಷ್ಟೇ ಅಲ್ಲ ಅಭಿಮಾನಿಗಳ ಶ್ರೀರಕ್ಷೆ ಇದೆ. ಹಳೆಯ ಶಿವರಾಜ್ ಕುಮಾರ್ ಇನ್ಮುಂದೆ ಇರುವುದಿಲ್ಲ ಎಂದು ಅವರು ಸಂತಸಪಟ್ಟರು.