ಹೊಸಪೇಟೆ : ಇತ್ತೀಚಿಗೆ ಕೊಪ್ಪಳ ಜಿಲ್ಲೆಯ ತುಂಗಭದ್ರಾ ಜಲಾಶಯದ 19ನೇ ಕೃಸ್ಟ್ ಗೇಟ್ ನೀರಿನಲ್ಲಿ ಕೊಚ್ಚಿ ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಈ ಒಂದು ಘಟನೆಯಲ್ಲಿ ಜಲಾಶಯದ ಮೀನುಗಾರರ ಹಲವು ತೆಪ್ಪ ಬಲೆಗಳು ಸಂಕಷ್ಟಕ್ಕೆ ಸಿಲುಕಿದ್ದು, ಶೀಘ್ರದಲ್ಲಿ ಅವರಿಗೆ ತೆಪ್ಪ ಹಾಗೂ ಬಲೆಗಳನ್ನು ಒದಗಿಸಲಾಗುತ್ತದೆ ಎಂದು ಮೀನುಗಾರಿಕೆ ಇಲಾಖೆಯ ಸಚಿವ ಮಂಕಾಳು ವೈದ್ಯ ತಿಳಿಸಿದರು.
ಅವರು ನಿನ್ನೆ ನಗರದ ಜಿಪಂ ಸಭಾಂಗಣದಲ್ಲಿ ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ ಮೀನುಗಾರರ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಲಾಶಯದ ಗೇಟ್ ಕಿತ್ತು ಬಂದಾಗ ಮೀನುಗಾರರ ಬಲೆ, ತೆಪ್ಪಗಳು ತೇಲಿ ಹೋಗಿವೆ. ಈಗ ಮೀನುಗಾರರಿಗೆ ಬಲೆ, ತೆಪ್ಪಗಳನ್ನು ನೀಡಲಾಗುವುದು ಎಂದು ಹೇಳಿದರು.
ಈ ಭಾಗದಲ್ಲಿ ಮೀನುಗಾರರು ತೆಪ್ಪ ಬಳಸುತ್ತಾರೆ. ಈ ಭಾಗದ ಮೀನುಗಾರರು ಬಯಸಿದರೆ, ಬೋಟಿಂಗ್ ಬಳಕೆಗೆ ಎಂಜಿನ್ ಒದಗಿಸಲಾಗುವುದು. ಮೀನುಗಾರರ ಹಿತ ಕಾಪಾಡುವ ಕೆಲಸ ಮಾಡಲಾಗುವುದು. ಜಲಾಶಯದ ಗೇಟ್ ಮುರಿದಾಗ ಮೀನುಗಾರರಿಗೂ ತೊಂದರೆ ಆಗಿದೆ. ಇದನ್ನು ಗಮನಿಸಿಯೇ ಖುದ್ದು ಪರಿಶೀಲನೆಗೆ ಬಂದಿರುವೆ ಎಂದರು.
ವಿಜಯನಗರ ಹೊಸ ಜಿಲ್ಲೆ ಆಗಿದೆ. ಮೀನುಗಾರಿಕಾ ಇಲಾಖೆಗೆ ಜಿಲ್ಲಾ ಮಟ್ಟದ ಕಚೇರಿಯನ್ನು ಶೀಘ್ರದಲ್ಲೇ ತೆರೆಯಲಾಗುವುದು. ಈಗಾಗಲೇ ಪರವಾನಗಿ ಕೂಡ ನೀಡಲಾಗಿದೆ. ಜಿಲ್ಲಾ ಕಚೇರಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಲಾಗುವುದು. ಈಗಾಗಲೇ ಈ ಕುರಿತು ಜಿಲ್ಲಾಧಿಕಾರಿ ಜತೆಗೂ ಚರ್ಚಿಸಲಾಗಿದೆ. ಜಿಲ್ಲೆಯಲ್ಲಿ ಐಸ್ ಪ್ಲಾಂಟ್ ನಿರ್ಮಾಣ ಮಾಡಲಾಗುವುದು. ಮೀನಿನ ಸ್ಟೋರೇಜ್ ನಿರ್ಮಿಸಲಾಗುವುದು. ಜೊತೆಗೆ ಮೀನಿನ ಹೋಟೆಲ್ ಕೂಡ ನಿರ್ಮಿಸಲಾಗುವುದು ಎಂದರು.