ತುಮಕೂರು : ತುಮಕೂರು ಜಿಲ್ಲಾಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಮತ್ತು ಅವಳಿ ಮಕ್ಕಳು ಸಾವನ್ನಪ್ಪಿರುವ ಘಟನೆ ಸಂಬಂಧಿಸಿದಂತೆ ತುಮಕೂರಿನ ಅಮರಜ್ಯೋತಿ ನಗರದಲ್ಲಿರುವ ಸರ್ಕಾರಿ ಬಾಲಮಂದಿರಕ್ಕೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಭೇಟಿ ನೀಡಿದರು.
ಈ ವೇಳೆ ಮೃತ ಕಸ್ತೂರಿ ಪುತ್ರಿ ಶಂಕರಿಗೆ ಸರ್ಕಾರದಿಂದ 10 ಲಕ್ಷ ರೂ. ಚೆಕ್ ವಿತರಣೆ ಮಾಡಿದರು. ಬಾಲಕಿ ಹೆಸರಿನಲ್ಲಿ ಎಫ್ಡಿ ಮಾಡುವುದಾಗಿ ಸಚಿವರು ಭರವಸೆ ನೀಡಿದರು. ನಂತರ ಮಾತನಾಡಿದ ಸಚಿವರು ಕಮಿಷನರ್ ದರ್ಜೆ ಅಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ತನಿಖಾ ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದರು.
ತುಮಕೂರು ನಗರದ ಆಂಜನೇಯ ದೇಗುಲದ ಬಳಿ ಪುತ್ರಿ ಜೊತೆಗೆ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ತಮಿಳುನಾಡು ಮೂಲದ ಕಸ್ತೂರಿ (30) ಎಂಬ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಸ್ಥಳೀಯರು ಆಟೋದಲ್ಲಿ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಗರ್ಭಿಣಿ ಮಹಿಳೆ ಕಸ್ತೂರಿ ಬಳಿ ತಾಯಿ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಇಲ್ಲವೆಂದು ಜಿಲ್ಲಾಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಿಸಿದ್ದರು.