ಮಂಗಳೂರು: ಪಶ್ಚಿಮ ಏಷ್ಯಾದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದಿಂದಾಗಿ ಜಾಗತಿಕ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಬೆನ್ನಲ್ಲೇ, ಅಮೆರಿಕದಿಂದ ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್ (LPG) ಹೊತ್ತ ಬೃಹತ್ ಸರಕು ಹಡಗು ‘ಪೈಕ್ಸಿಸ್ ಪಯೋನಿಯರ್’ (Pyxis Pioneer) ಭಾನುವಾರ ಬೆಳಿಗ್ಗೆ ನವ ಮಂಗಳೂರು ಬಂದರಿಗೆ (NMPA) ಯಶಸ್ವಿಯಾಗಿ ತಲುಪಿದೆ.
ಅಮೆರಿಕದ ಟೆಕ್ಸಾಸ್ ರಾಜ್ಯದ ನೆದರ್ಲ್ಯಾಂಡ್ ಬಂದರಿನಿಂದ ಫೆಬ್ರವರಿ 14 ರಂದು ಹೊರಟಿದ್ದ ಈ ಹಡಗು, ಸುಮಾರು ಒಂದು ತಿಂಗಳ ಸುದೀರ್ಘ ಪ್ರಯಾಣದ ನಂತರ ಮಂಗಳೂರು ಬಂದರಿನ 13ನೇ ಬರ್ತ್ನಲ್ಲಿ ಲಂಗರು ಹಾಕಿದೆ.
ಈ ಹಡಗು ಸುಮಾರು 16,714 ಟನ್ ಅಡುಗೆ ಅನಿಲವನ್ನು ಹೊತ್ತು ತಂದಿದೆ. ಇದು ‘ಏಜಿಸ್ ಲಾಜಿಸ್ಟಿಕ್ಸ್’ (Aegis Logistics) ಸಂಸ್ಥೆಗೆ ಸೇರಿದ ದಾಸ್ತಾನು ಆಗಿದ್ದು, ದಕ್ಷಿಣ ಭಾರತದ ಮಾರುಕಟ್ಟೆಗೆ ಪೂರೈಕೆಯಾಗಲಿದೆ.
ಪಶ್ಚಿಮ ಏಷ್ಯಾದ ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ ಇರುವುದರಿಂದ ಭಾರತವು ಇಂಧನಕ್ಕಾಗಿ ಅಮೆರಿಕ ಮತ್ತು ರಷ್ಯಾದತ್ತ ಮುಖ ಮಾಡಿದೆ. ಮಂಗಳೂರು ಬಂದರಿಗೆ ಮುಂದಿನ ವಾರದಲ್ಲಿ ಇನ್ನೂ ಎರಡು ಹಡಗುಗಳು ಬರಲಿದ್ದು, ಒಟ್ಟು 72,700 ಟನ್ ಎಲ್ಪಿಜಿ ಲಭ್ಯವಾಗಲಿದೆ.
ಯುದ್ಧದ ಹಿನ್ನೆಲೆಯಲ್ಲಿ ಇಂಧನ ತರುವ ಹಡಗುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಶಿಪ್ಪಿಂಗ್ ಸಚಿವಾಲಯವು ಮಾರ್ಚ್ 14 ರಿಂದ 31 ರವರೆಗೆ ಮಂಗಳೂರು ಬಂದರಿನಲ್ಲಿ ಕಾರ್ಗೋ ಶುಲ್ಕಗಳನ್ನು ಮನ್ನಾ ಮಾಡಿದೆ.








