ಬೆಂಗಳೂರು : ಸರ್ಕಾರ ಆರಂಭಿಸಿರುವ ಪುನೀತ್ ರಾಜ್ ಕುಮಾರ್ ಹೃದಯಜ್ಯೋತಿ ಯೋಜನೆಯು ಗಮನಾರ್ಹ ಯಶಸ್ಸು ಕಂಡಿದೆ. ಈ ವರ್ಷವೇ ಉಳಿದ ಎಲ್ಲಾ ತಾಲೂಕುಗಳಲ್ಲೂ ಈ ಯೋಜನೆಯನ್ನು ಆರಂಭಿಸುವ ಕುರಿತು ಚರ್ಚಿಸಲಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಠಾತ್ ಹೃದಯಾಘಾತವನ್ನು ತಪ್ಪಿಸಲು ನಮ್ಮ ಸರ್ಕಾರ ಆರಂಭಿಸಿರುವ ಪುನೀತ್ ರಾಜ್ ಕುಮಾರ್ ಹೃದಯಜ್ಯೋತಿ ಯೋಜನೆಯು ಗಮನಾರ್ಹ ಯಶಸ್ಸು ಕಂಡಿದೆ. ಹೃದಯಾಘಾತದ ಸಂದರ್ಭದ ಅಮೂಲ್ಯ ಸಮಯದಲ್ಲಿ ಜನರ ಜೀವ ಉಳಿಸುವಲ್ಲಿ ನೆರವಾಗುತ್ತಿದೆ. ಇದನ್ನು ರಾಜ್ಯದ ಎಲ್ಲಾ ತಾಲೂಕಿಗೂ ವಿಸ್ತರಿಸಲು ನಾವು ತಯಾರಿ ನಡೆಸುತ್ತಿದ್ದೇವೆ. ಈಗಾಗಲೇ 2 ಹಂತಗಳಲ್ಲಿ 71 ತಾಲೂಕು ಆಸ್ಪತ್ರೆ ಸೇರಿ ಒಟ್ಟು 86 ಆಸ್ಪತ್ರೆಗಳಲ್ಲಿ ಯೋಜನೆ ಜಾರಿಯಲ್ಲಿದ್ದು ಈ ವರ್ಷವೇ ಉಳಿದ ಎಲ್ಲಾ ತಾಲೂಕುಗಳಲ್ಲೂ ಈ ಯೋಜನೆಯನ್ನು ಆರಂಭಿಸುವ ಕುರಿತು ಚರ್ಚಿಸಲಾಗುವುದು ಎಂದು ಹೇಳಿದ್ದಾರೆ.
ಹೃದಯಾಘಾತವನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಅಗತ್ಯವಿರುವ ದುಬಾರಿ ಇಂಜೆಕ್ಷನ್ ಅನ್ನು ಉಚಿತವಾಗಿ ನೀಡಿ ಜನತೆಯ ಅಮೂಲ್ಯ ಜೀವ ಉಳಿಸುವುದು ನಮ್ಮ ಸರ್ಕಾರದ ಉದ್ದೇಶವಾಗಿದ್ದು ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕಾರ್ಯಪ್ರವೃತ್ತವಾಗಿದೆ ಎಂದು ಮಾಹಿತಿ ನೀಡಿದ್ದಾರೆ.