ಪ್ರಯಾಗ್‌ರಾಜ್: ಸಾರ್ವಜನಿಕ ಭೂಮಿಯನ್ನು ಯಾವುದೇ ವ್ಯಕ್ತಿ ಅಥವಾ ಸಮೂಹವು ನಮಾಜ್ ಮಾಡುವುದು ಸೇರಿದಂತೆ ಯಾವುದೇ ಧಾರ್ಮಿಕ ಚಟುವಟಿಕೆಗಳಿಗೆ ಪ್ರತ್ಯೇಕವಾಗಿ ಬಳಸುವಂತಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಅವಲೋಕಿಸಿದೆ. ಇಂತಹ ಚಟುವಟಿಕೆಗಳು ಸಾರ್ವಜನಿಕ ಸುವ್ಯವಸ್ಥೆ ಮತ್ತು ಇತರರ ಹಕ್ಕುಗಳಿಗೆ ಒಳಪಟ್ಟಿರುತ್ತವೆ ಎಂದು ನ್ಯಾಯಾಲಯ ಹೇಳಿದೆ.
ಸಂಭಾಲ್ ಜಿಲ್ಲೆಯ ಗುನ್ನೌರ್ ತಹಸಿಲ್‌ನ ಇಕೌನಾ ನಿವಾಸಿ ಅಸಿನ್ ಎಂಬುವವರು ನಮಾಜ್ ಸಲ್ಲಿಸಲು ಜಾಗವನ್ನು ಬಳಸುವ ಬಗ್ಗೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿಗಳಾದ ಸರಳ ಶ್ರೀವಾಸ್ತವ ಮತ್ತು ಗರಿಮಾ ಪ್ರಸಾದ್ ಅವರಿದ್ದ ವಿಭಾಗೀಯ ಪೀಠವು ಈ ಕೆಳಗಿನ ಪ್ರಮುಖ ಅಂಶಗಳನ್ನು ಉಲ್ಲೇಖಿಸಿದೆ:
ಸಾರ್ವಜನಿಕ ಭೂಮಿಯನ್ನು ಯಾವುದೇ ಒಂದು ಪಂಗಡವು ಏಕಪಕ್ಷೀಯವಾಗಿ ಧಾರ್ಮಿಕ ಉದ್ದೇಶಗಳಿಗಾಗಿ ಬಳಸುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. “ಅಂತಹ ಆಸ್ತಿಯ ಮೇಲೆ ಎಲ್ಲಾ ವ್ಯಕ್ತಿಗಳಿಗೂ ಸಮಾನ ಹಕ್ಕುಗಳಿರುತ್ತವೆ ಮತ್ತು ಅದರ ಮೇಲೆ ವಿಶೇಷ ಹಕ್ಕು ಸಾಧಿಸುವುದು ಕಾನೂನುಬದ್ಧವಾಗಿ ಸಾಧ್ಯವಿಲ್ಲ,” ಎಂದು ನ್ಯಾಯಾಲಯ ಹೇಳಿದೆ.
’ಮುನಾಜಿರ್ ಖಾನ್ ವಿರುದ್ಧ ಉತ್ತರ ಪ್ರದೇಶ ರಾಜ್ಯ’ ಪ್ರಕರಣದಂತಹ ಹಿಂದಿನ ತೀರ್ಪುಗಳನ್ನು ಉಲ್ಲೇಖಿಸಿದ ಹೈಕೋರ್ಟ್, ಖಾಸಗಿ ಆವರಣದೊಳಗೆ ನಡೆಯುವ ನೈಜ ಧಾರ್ಮಿಕ ಆಚರಣೆಗಳಿಗೆ ರಕ್ಷಣೆ ಇದೆ ಮತ್ತು ಅವುಗಳಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ. ಆದರೆ, ಇದು ಸಂಘಟಿತ ಅಥವಾ ನಿಯಮಿತ ಸಾಮೂಹಿಕ ಧಾರ್ಮಿಕ ಚಟುವಟಿಕೆಗಳನ್ನು ನಡೆಸಲು ನೀಡಲಾದ ಸಂಪೂರ್ಣ ಸ್ವಾತಂತ್ರ್ಯವಲ್ಲ ಎಂದು ತಿಳಿಸಿದೆ.








