ಚಿಕ್ಕಮಗಳೂರು : ಆನ್ ಲೈನ್ ಟ್ರೇಡಿಂಗ್ ಆಮಿಷಕ್ಕೆ ಒಳಗಾಗಿ ವ್ಯಕ್ತಿಯೊಬ್ಬರು ಬರೋಬ್ಬರಿ 1.28 ಕೋಟಿ ರೂಪಾಯಿ ಕಳೆದುಕೊಂಡಿರುವ ದಾರುಣ ಘಟನೆ ಚಿಕ್ಕಮಗಳೂರು ಜಿಲ್ಲೆಯ ಬೀರೂರು ತಾಲೂಕಿನ ಶಿವಪುರದಲ್ಲಿ ನಡೆದಿದೆ.
ಶಿವಪುರ ನಿವಾಸಿ ಸಿ.ಎನ್. ಕಲ್ಲೇಗೌಡ ಎಂಬುವವರೇ ಈ ಆನ್ಲೈನ್ ವಂಚನೆಗೆ ಬಲಿಯಾದ ದುರ್ದೈವಿ. ಕಳೆದ ಜನವರಿ ತಿಂಗಳಲ್ಲಿ ಕಲ್ಲೇಗೌಡ ಅವರು ಮೊಬೈಲ್ನಲ್ಲಿ ಫೇಸ್ಬುಕ್ ನೋಡುತ್ತಿದ್ದಾಗ ‘ಪ್ರೈಯಸ್’ (Price) ಎಂಬ ಟ್ರೇಡಿಂಗ್ ಜಾಹೀರಾತು ಕಾಣಿಸಿಕೊಂಡಿದೆ.ಕುತೂಹಲದಿಂದ ಆ ಜಾಹೀರಾತಿನ ಮೇಲೆ ಕ್ಲಿಕ್ ಮಾಡಿದಾಗ, ಅವರನ್ನು ಒಂದು ವಾಟ್ಸಪ್ ಗುಂಪಿಗೆ ಸೇರಿಸಲಾಗಿದೆ. ನಂತರ ಅವರ ಮೊಬೈಲ್ಗೆ ಟ್ರೇಡಿಂಗ್ ಲಿಂಕ್ ಒಂದನ್ನು ಕಳುಹಿಸಲಾಗಿದೆ.
ಹೂಡಿಕೆ: ಲಿಂಕ್ ನಲ್ಲಿದ್ದ ಕ್ಯೂಆರ್ ಕೋಡ್ (QR Code) ಸ್ಕ್ಯಾನ್ ಮಾಡಿದ ಕಲ್ಲೇಗೌಡ ಅವರು, ಆರಂಭದಲ್ಲಿ ತಮ್ಮ ಬ್ಯಾಂಕ್ ಖಾತೆಯಿಂದ 60,000 ರೂ. ಹೂಡಿಕೆ ಮಾಡಿದ್ದಾರೆ. ನಂತರ ಹಂತ-ಹಂತವಾಗಿ ಒಟ್ಟು 1.28 ಕೋಟಿ ರೂಪಾಯಿಗಳನ್ನು ಆ ಖಾತೆಗೆ ವರ್ಗಾಯಿಸಿದ್ದಾರೆ.
ಮೋಸದ ಅರಿವಾಗಿದ್ದು ಯಾವಾಗ?
ತಿಂಗಳುಗಳೇ ಕಳೆದರೂ ಹೂಡಿಕೆ ಮಾಡಿದ ಹಣಕ್ಕೆ ಯಾವುದೇ ಲಾಭಾಂಶ (Profit) ಬಾರದಿದ್ದಾಗ ಕಲ್ಲೇಗೌಡ ಅವರಿಗೆ ಅನುಮಾನ ಬಂದಿದೆ. ಕೂಡಲೇ ತಾವು ಹೂಡಿಕೆ ಮಾಡಿದ್ದ ಹಣವನ್ನು ಹಿಂಪಡೆಯಲು (Withdraw) ಯತ್ನಿಸಿದಾಗ, ಅದು ಸಾಧ್ಯವಾಗಿಲ್ಲ. ಆಗ ತಮಗೆ ದೊಡ್ಡ ಮಟ್ಟದ ವಂಚನೆಯಾಗಿರುವುದು ಅವರ ಅರಿವಿಗೆ ಬಂದಿದೆ.ಈ ಕುರಿತು ಸಂತ್ರಸ್ತರು ಚಿಕ್ಕಮಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಎಚ್ಚರಿಕೆ: ಸೋಷಿಯಲ್ ಮೀಡಿಯಾಗಳಲ್ಲಿ ಬರುವ ಅನಾಮಧೇಯ ಟ್ರೇಡಿಂಗ್ ಜಾಹೀರಾತುಗಳು ಮತ್ತು ವಾಟ್ಸಪ್ ಗುಂಪುಗಳ ಮೂಲಕ ಹಣ ಹೂಡಿಕೆ ಮಾಡುವಂತೆ ಬರುವ ಆಮಿಷಗಳ ಬಗ್ಗೆ ಜಾಗರೂಕರಾಗಿರಿ.








