ಕೊಪ್ಪಳ: ಪರೀಕ್ಷೆ ಬರೆದ ಮೌಲ್ಯಮಾಪನ ಸರಿಯಾಗಿ ಮಾಡದೇ ವಿದ್ಯಾರ್ಥಿಯ ಮನವಿಗೂ ಬೆಲೆ ನೀಡದ ಪಿಯು ಬೋರ್ಡ್ ಈಗ ಕೋರ್ಟ್ ನೋಟಿಸ್ಗೆ ಎಚ್ಚೆತ್ತು ಹೆಚ್ಚುವರಿ ಅಂಕ ನೀಡಲು ಮುಂದಾಗಿದೆ.
ಗಂಗಾವತಿ ತಾಲೂಕಿನ ಶ್ರೀರಾಮನಗರ ವಿದ್ಯಾನಿಕೇತನ ಕಾಲೇಜಿನ ವಿದ್ಯಾರ್ಥಿನಿ ಚಂದ್ರಮ್ಮ ದ್ವಿತೀಯ ಪಿಯುಸಿ ವಿಜ್ಞಾನ ಪರೀಕ್ಷೆ ಬರೆದಿದ್ದಳು. ಪರೀಕ್ಷೆಯ ಫಲಿತಾಂಶ ಪ್ರಕಟವಾದಾಗ ವಿದ್ಯಾರ್ಥಿನಿಗೆ ಶಾಕ್ ಆಗಿತ್ತು. ಜೀವಶಾಸ್ತ್ರ ವಿಷಯದಲ್ಲಿ ಕೇವಲ 29 ಅಂಕ ಹಾಗೂ ಇಂಗ್ಲಿಷ್ನಲ್ಲಿ 40 ಅಂಕಗಳನ್ನು ನೀಡಿದ್ದರಿಂದ ಒಟ್ಟು ಶೇ. 65 ರಷ್ಟು ಫಲಿತಾಂಶ ಮಾತ್ರ ಬಂದಿತ್ತು.ಕಾರಟಗಿ ತಾಲೂಕಿನ ಗುಂಡೂರು ಗ್ರಾಮದ ನಿವಾಸಿಯಾದ ಡಿ.ಸತ್ಯನಾರಾಯಣ ಅವರ ಪುತ್ರಿಯಾಗಿರುವ ಚಂದ್ರಮ್ಮ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.86, ಪಿಯು ಪ್ರಥಮ ವರ್ಷದಲ್ಲಿ ಶೇ. 98 ರಷ್ಟು ಫಲಿತಾಂಶವನ್ನು ಪಡೆದಿದ್ದಳು.
ದ್ವಿತೀಯ ಪಿಯುಸಿಯಲ್ಲಿ ಇಷ್ಟು ಕಡಿಮೆ ಅಂಕ ಬರಲು ಸಾಧ್ಯವೇ ಇಲ್ಲ ಎಂದು ತಿಳಿದು ಕಾಲೇಜಿನ ಉಪನ್ಯಾಸಕರು, ಪಾಲಕರು ಪಿಯು ಬೋರ್ಡ್ಗೆ ಶುಲ್ಕವನ್ನು ಭರಿಸಿ, ಉತ್ತರ ಪರೀಕ್ಷೆಯ ಪೋಟೋ ಕಾಪಿಯನ್ನು ತರಿಸಿಕೊಂಡಿದ್ದಾರೆ. ಪೋಟೊ ಕಾಪಿಯಲ್ಲಿ ಉತ್ತರ ಸರಿ ಇದ್ದರೂ ಅಂಕ ಸರಿಯಾಗಿ ನೀಡದೇ ಇರುವ ವಿಚಾರ ಗೊತ್ತಾಗಿದೆ. ಕೂಡಲೇ ವಿದ್ಯಾರ್ಥಿನಿ ಮರು ಮೌಲ್ಯ ಮಾಪನಕ್ಕೆ ಅರ್ಜಿ ಹಾಕಿದ್ದಾರೆ.