ಯಾದಗಿರಿ : ಯಾದಗಿರಿಯ ಸೈಬರ್ ಕ್ರೈಂ ಠಾಣೆಯ ಪಿಎಸ್ಐ ಪರಶುರಾಮ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಪಿಎಸ್ಐ ಪರಶುರಾಮ ಅವರ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ವೇಳೆ ಕೂಡಲೇ ರಾಜ್ಯ ಸರ್ಕಾರ ಈ ಒಂದು ಪ್ರಕರಣವನ್ನು ಸಿಬಿಐ ಗೆ ವಹಿಸಬೇಕು ಎಂದು ಆಗ್ರಹಿಸಿದರು.
ಮೃತ ಪರಶುರಾಮ್ ಕುಟುಂಬಸ್ಥರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಬೇಕು. ಇಲ್ಲದಿದ್ದರೆ ಪ್ರಕರಣ ಮುಚ್ಚಿ ಹಾಕುವ ಸಾಧ್ಯತೆ ಇದೆ. ಈ ಘಟನೆಯಲ್ಲಿ ಆಡಳಿತ ಪಕ್ಷದ ಶಾಸಕರದ್ದೇ ಕೈವಾಡ ಇರುವುದರಿಂದ ಸರ್ಕಾರ ಕ್ರಮ ಜರುಗಿಸಲು ಹಿಂದುಮುಂದು ನೋಡುತ್ತದೆ. ಸಂವಿಧಾನ, ಅಂಬೇಡ್ಕರ್ ಬಗ್ಗೆ ಸಿಎಂ ಭಾಷಣ ಮಾಡುತ್ತಾರೆ. ಅವರಿಗೇಕೆ ಈ ಕುಟುಂಬದ ರೋದನೆ ಅರ್ಥವಾಗುತ್ತಿಲ್ಲ ಎಂದು ಕಿಡಿ ಕಾರಿದರು.
ಪರುಶುರಾಮ್ ಸಾವನ್ನಪ್ಪಿ ಇಂದಿಗೆ 11 ದಿನಗಳು ಕಳೆದಿವೆ. ಈ ಘಟನೆಗೆ ಕಾರಣರಾದ ಅಪರಾಧಿಗಳು ಯಾರೆಂಬುದು ಎಲ್ಲರಿಗೂ ಗೊತ್ತಿದೆ. ಆದರೂ ಅವರ ಬಂಧನವಾಗಿಲ್ಲ. ಈ ಕೂಡಲೇ ಆರೋಪಿಗಳ ಬಂಧನವಾಗಬೇಕು. ಪರಶುರಾಮ್ ಕುಟುಂಬಕ್ಕೆ ಪರಿಹಾರ ನೀಡಬೇಕು. ಪರಶುರಾಮ್ ಪತ್ನಿಗೆ ಕೂಡಲೇ ಸರ್ಕಾರಿ ನೌಕರಿ ನೀಡಬೇಕು.
ರಾಜ್ಯ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಗೃಹ ಸಚಿವ ಜಿ.ಪರಮೇಶ್ವರ್ ಅವರು ಇದು ಸಿಬಿಐಗೆ ಕೊಡುವಂತಹ ಪ್ರಕರಣ ಅಲ್ಲ ಎಂದು ಹೇಳಿಕೆ ನೀಡುತ್ತಿದ್ದಾರೆ. ಅವರು ಮೊದಲು ಇಂತಹ ದುರಹಂಕಾರ, ಬೇಜವಾಬ್ದಾರಿ ಹೇಳಿಕೆ ನೀಡೋದನ್ನು ನಿಲ್ಲಿಸಬೇಕು. ಮೊದಲು ಈ ದಲಿತ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು ಎಂದರು.