ಬೆಂಗಳೂರು: ಕರ್ನಾಟಕ ಪರೀಕ್ಷಾಪ್ರಾಧಿಕಾರ (ಕೆಇಎ) ಜ.23ರಂದು ನಡೆಸಲಿರುವ ಪಿಎಸ್ಐ ನೇಮಕಾತಿ ಪರೀಕ್ಷೆಗೆ ವಸ್ತ್ರ ಸಂಹಿತೆ ನಿಯಮಾವಳಿ ಪ್ರಕಟಿಸಿದ್ದು, ಸರಳ ಉಡುಪು ಧರಿಸಿ ಬರಲು ಸೂಚಿಸಿದೆ. ಮಂಗಳಸೂತ್ರ ಮತ್ತು ಕಾಲುಂಗುರ ಹೊರ ತುಪಡಿಸಿ ಇನ್ಯಾವುದೇ ಆಭರಣಗಳನ್ನು ಧರಿಸಿ ಬರುವಂತಿಲ್ಲ ಎಂದು ತಿಳಿಸಿದೆ.
ಇತ್ತೀಚಿನ ನಿಗಮ ಮಂಡಳಿ ಪರೀಕ್ಷೆಗಳ ವೇಳೆ ಪರೀಕ್ಷಾ ಕೇಂದ್ರಗಳಿಗೆ ಪ್ರವೇಶಿಸುವ ಮುನ್ನ ಮಂಗಳಸೂತ್ರ ಮತ್ತು ಕಾಲುಂಗುರವನ್ನು ತೆಗೆಸಿದ್ದು ಭಾರೀ ವಿವಾದಕ್ಕೀಡಾಗಿತ್ತು. ಇದು ಬಹುಸಂಖ್ಯಾತ ಹಿಂದೂ ಸಂಸ್ಕೃತಿಗೆ ಅಗೌರವ ತೋರಲಾಗಿದೆ ಎಂದು ಸಾರ್ವಜನಿಕರು ಹಾಗೂ ರಾಜಕೀಯ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಕೆ-ಸೆಟ್ ಪರೀಕ್ಷೆ ನಂತರ ಇದೀಗ ಪಿಎಸ್ಐ ಪರೀಕ್ಷೆಗೂ ಮಂಗಳ ಸೂತ್ರ ಮತ್ತು ಕಾಲುಂಗುರ ಧರಿಸಿ ಬರಲು ಅವಕಾಶ ನೀಡಲಾಗಿದೆ.
ಆದರೆ, ತಪಾಸಣೆ ದೃಷ್ಟಿಯಿಂದ ಪರೀಕ್ಷಾ ಸಮಯಕ್ಕೆ ಎರಡು ಗಂಟೆ ಮೊದಲೇ ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳು ಹಾಲ್ ಟಿಕೆಸ್ ಸೇರಿದಂತೆ ಸೂಚಿತ ದಾಖಲೆಗಳೊಂದಿಗೆ ಹಾಜರಿರಬೇಕು ಎಂದು ಸೂಚಿಸಿದೆ.
ವಸ್ತ್ರಸಂಹಿತೆ ಏನು: ಪುರುಷ ಅಭ್ಯರ್ಥಿಗಳು ಅರೆತೋಳಿನ ಅಂಗಿ, ಹೆಚ್ಚಿನ ಜೇಬುಗಳಿಲ್ಲದ ಸರಳ ಪ್ಯಾಂಟ್ ಕಡ್ಡಾಯ. ಬೆಲ್ಟ್, ಶೂಗಳನ್ನು ನಿಷೇಧಿಸಲಾಗಿದೆ. ಕಂಠಾಭರಣ, ಕಿವಿಯೋಲೆ, ಉಂಗುರ ಮತ್ತು ಕೈ ಕಡಗಗಳನ್ನು ಧರಿಸಿಕೊಂಡು ಬರಬಾರದು. ಮಹಿಳಾ ಅಭ್ಯರ್ಥಿಗಳಿಗೆ ವಿಪರೀತ ಕಸೂತಿ, ಹೂಗಳು, ಬ್ರೂಚ್, ಬಟನ್, ಪೂರ್ಣ ತೋಳಿನ ರವಿಕೆ/ವಸ್ತ್ರ ಇರುವ ಉಡುಪು ಮತ್ತು ಜೀನ್ಸ್ ಪ್ಯಾಂಟ್ ಹಾಗೂ ಶೂ, ದಪ ಸೋಲ್ನ ಚಪಲಿ ಧರಿಸಿ ಬರುವಂತಿಲ್ಲ.