ಕೊಪ್ಪಳ : ಯಾದಗಿರಿಯ ಸೈಬರ್ ಕ್ರೈಂ ಠಾಣೆಯ ಪಿಎಸ್ಐ ಪರಶುರಾಮ್ ಅವರ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಮೃತ ಪರಶುರಾಮ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.ಈ ವೇಳೆ ಪರಶುರಾಮ ಪತ್ನಿಗೆ ಸರಕಾರಿ ಕೆಲಸ ಹಾಗೂ ಅವರ ಕುಟುಂಬಸ್ಥರಿಗೆ 50 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ ಎಂದು ಘೋಷಿಸಿದರು.
ಹೌದು ಇಂದು ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನಸೋಮನಾಳ ಗ್ರಾಮದ ಮೃತ ಪರಶುರಾಮ ಮನೆಗೆ ಭೇಟಿ ನೀಡಿದ ಅವರು ಪರಶುರಾಮ್ ತಂದೆ ತಾಯಿಗೆ ಸಾಂತ್ವನ ಹೇಳಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಪರಶುರಾಮ್ ಕುಟುಂಬಕ್ಕೆ ಒಟ್ಟು 50 ಲಕ್ಷ ಹಣ ನೀಡುತ್ತೇವೆ ಎಂದು ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದಲ್ಲಿ ಜಿ.ಪರಮೇಶ್ವರ್ ತಿಳಿಸಿದರು.
ಪರಶುರಾಮ್ ಅವರ ಸಾವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪರಶುರಾಮ ಪತ್ನಿಗೆ ಇಲಾಖೆಯಲ್ಲಿ ಸೂಕ್ತವಾದ ಕೆಲಸ ಕೊಡುತ್ತೇವೆ.ರಾಯಚೂರು ಕೃಷಿ ವಿಶ್ವವಿದ್ಯಾಲಯ ಅಥವಾ ಜೆಸ್ಕಾಂ ನಲ್ಲಿ ಕೊಡುವಂತೆ ಕೇಳಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಜೊತೆ ಮಾತನಾಡುತ್ತೇನೆ ಎಂದರು.