ತುಮಕೂರು : ಕೃಷಿ ಪಂಪ್‌ಸೆಟ್‌ಗಳಿಗೆ ಹಗಲಿನ ವೇಳೆಯೇ ಸಮರ್ಪಕ ವಿದ್ಯುತ್ ಪೂರೈಸಲು ನೆರವಾಗುವ ‘ಕುಸುಮ್ ಸಿ’ಯೋಜನೆಗೆ ಭೂಮಿ ಗುತ್ತಿಗೆ ನೀಡುವ ಮೂಲಕ ರೈತರು ಬೆಂಬಲ ನೀಡಬೇಕು ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್ ಶಿವಶಂಕರ್ ಗುರುವಾರ ಮನವಿ ಮಾಡಿದ್ದಾರೆ.
ಸೇವಾ ಪರ್ವ ಆಚರಣೆ ಕಾರ್ಯಕ್ರಮದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ರಾಜಸ್ಥಾನದ ಬನ್ವಾರಾದಲ್ಲಿ ಕುಸುಮ್ ಸಿ ಯೋಜನೆಗೆ ಚಾಲನೆ ನೀಡಿದರು. ಈ ಕಾರ್ಯಕ್ರಮವನ್ನು ದೃಶ್ಯ ಮಾಧ್ಯಮದ ಮೂಲಕ ಇಂಧನ ಇಲಾಖೆ ಮತ್ತು ತುಮಕೂರು ಜಿಲ್ಲಾ ಆಡಳಿತದ ಸಂಯುಕ್ತಾಶ್ರಯದಲ್ಲಿ ತುಮಕೂರಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ನೇರ ಪ್ರಸಾರ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು,”ಪಿಎಂ ಕುಸುಮ್-ಸಿ ಯೋಜನೆ ರೈತರಿಗೆ ಅದರಲ್ಲೂ ಮುಖ್ಯವಾಗಿ ಬಯಲು ಸೀಮೆ ಭಾಗದ ರೈತರಿಗೆ ವರದಾನವಾಗಿದೆ. ಯೋಜನೆ ಜಾರಿಗೊಳಿಸಲು ಸರ್ಕಾರ ಎಲ್ಲಾ ರೀತಿಯ ಬೆಂಬಲ ನೀಡುತ್ತಿದೆ. ಆದರೆ, ಅದಕ್ಕೆ ಭೂಮಿ ಕೊರತೆ ಇದೆ. ಹೀಗಾಗಿ ಸ್ಥಳೀಯ ಶಾಸಕರು ಆಸಕ್ತಿ ವಹಿಸಿ ಯೋಜನೆ ಅನುಷ್ಠಾನಗೊಳಿಸಲು ಸಹಕರಿಸಿದರೆ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ಸರ್ಕಾರಿ ಭೂಮಿ ಲಭ್ಯವಿರದ ಸ್ಥಳಗಳಲ್ಲಿ ರೈತರೇ ಭೂಮಿಯನ್ನು ಗುತ್ತಿಗೆ ನೀಡುವ ಮೂಲಕ ವಾರ್ಷಿಕ ಆದಾಯಗಳಿಸಬಹುದಾಗಿದೆ. ಹಾಗಾಗಿ,ರೈತರು ಭೂಮಿ ನೀಡಲು ಮುಂದೆ ಬರಬೇಕು ಎಂದು ಮನವಿ ಮಾಡಿದರು.
ಫೀಡರ್ ಮಟ್ಟದ ಸೌರೀಕರಣ ಯೋಜನೆ ಕುಸುಮ್-ಸಿ ಅಡಿಯಲ್ಲಿ ರಾಜ್ಯದಲ್ಲಿ ಒಟ್ಟು 3,900 ಮೆಗಾವ್ಯಾಟ್‌ಗಳ ವಿದ್ಯುತ್ ಉತ್ಪಾದನೆ ಗುರಿ ಇದೆ. ಸದ್ಯ 359 ಕಡೆಗಳಲ್ಲಿ 2,400 ಮೆಗಾವ್ಯಾಟ್ ಸಾಮರ್ಥ್ಯದ ಸ್ಥಾವರಗಳನ್ನು ಸ್ಥಾಪಿಸುವ ಕಾರ್ಯ ಪ್ರಗತಿಯಲ್ಲಿದೆ. ತುಮಕೂರು, ದಾವಣಗೆರೆ ಮತ್ತು ಚಿತ್ರದುರ್ಗ ಭಾಗದಲ್ಲಿ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ವಿದ್ಯುತ್ ಬೇಡಿಕೆ ಇದೆ. ಹಾಗಾಗಿಯೇ ಇದೇ ಭಾಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲು ನಿರ್ಧರಿಸಲಾಯಿತು ಎಂದರು.
ಮನೆ ಮನೆಗಳಲ್ಲೂ ಸೌರ ಶಕ್ತಿ ಬಳಕೆ ಉತ್ತೇಜಿಸುವ ‘ಪಿಎಂ ಸೂರ್ಯ ಘರ್’ ಯೋಜನೆ ಬಗ್ಗೆಯೂ ರೈತಾಪಿ ವರ್ಗ ಹಾಗೂ ಸಾರ್ವಜನಿಕರು ಆಸಕ್ತಿ ತೋರಬೇಕು. ಮನೆಯ ಮೇಲ್ಛಾವಣಿ ಮೇಲೆ ಸೌರ ಫಲಕ ಅಳವಡಿಸಿ, ವಿದ್ಯುತ್ ಉತ್ಪಾದಿಸಬಹುದಾಗಿದೆ. ಮನೆಗೆ ಬಳಕೆಯಾಗಿ ಉಳಿದ ಹೆಚ್ಚುವರಿ ವಿದ್ಯುತ್ತನ್ನು ಮಾರಾಟ ಮಾಡುವ ಮೂಲಕ ಹೆಚ್ಚುವರಿ ಆದಾಯ ಗಳಿಸಬಹುದಾಗಿದೆ. ಯೋಜನೆಗೆ ಕೇಂದ್ರ ಸರ್ಕಾರ ಸಹಾಯಧನ ನೀಡುತ್ತಿದ್ದು, ಪ್ರತಿ ಕಿ.ವ್ಯಾ.ಗೆ 30 ಸಾವಿರ ರೂಪಾಯಿ ಸಬ್ಸಿಡಿ ದೊರೆಯುತ್ತದೆ ಎಂದು ಸಲಹೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ನೇತೃತ್ವದಲ್ಲಿ ಕಳೆದ ಜೂನ್ 11ರಂದು ಗೌರಿಬಿದೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಸುಮ್- ಸಿ ಯೋಜನೆಗೆ ರಾಜ್ಯದಲ್ಲಿ ಚಾಲನೆ ನೀಡಲಾಗಿದೆ. ಕೃಷಿ ಪಂಪ್‌ಸೆಟ್‌ಗಳಿಗೆ ಹಗಲಿನ ವೇಳೆಯೇ 7 ಗಂಟೆಗಳ ಕಾಲ ವಿದ್ಯುತ್ ಪೂರೈಸಲು ನೆರವಾಗುವ ಸೌರಶಕ್ತಿ ಯೋಜನೆ- ‘ಕುಸುಮ್ ಸಿ’ ರೈತರಿಗೆ ವರದಾನ,” ಎಂದು ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ರುದ್ರಪ್ಪಯ್ಯ ಹೇಳಿದರು.
ಕಾರ್ಯಕ್ರಮದಲ್ಲಿ ತುಮಕೂರಿನ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹಾಗೂ ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತುಮಕೂರು ಗ್ರಾಮಾಂತರ ಶಾಸಕ ಬಿ ಸುರೇಶ್ ಗೌಡ ಅವರು, ಪಂಪ್‌ಸೆಟ್‌ಗೆ ಅಗತ್ಯ ಇರುವ ವಿದ್ಯುತ್ತನ್ನು ಜಮೀನಿನಲ್ಲೇ ಉತ್ಪಾದಿಸಲು ನೆರವಾಗುವ ಪಿಎಂ ಕುಸುಮ್-ಬಿ ಯೋಜನೆಯ ಲಾಭವನ್ನು ರೈತರು ಪಡೆಯಬೇಕು. ಕೇಂದ್ರ ಸರ್ಕಾರವು ಯೋಜನೆಗೆ ಶೇ. 30ರಷ್ಟು ಸಹಾಯಧನ ಒದಗಿಸಿದರೆ, ರಾಜ್ಯ ಸರ್ಕಾರದ ಶೇ. 50ರಷ್ಟು ಸಬ್ಸಿಡಿ ನೀಡುತ್ತಿದೆ. ಫಲಾನುಭವಿಗಳು ಶೇ. 20ರಷ್ಟನ್ನು ಭರಿಸಿದರೆ ಸಾಕು. ಇಂಧನ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನ ಮತ್ತು ಸಹಕಾರದಿಂದ ಹೆಚ್ಚಿನ ಸಂಖ್ಯೆಯ ರೈತರು ಇದರ ಲಾಭ ಪಡೆಯಬಹುದು ಎಂದಿದ್ದಾರೆ.
GOOD NEWS: ಬೆಂಗಳೂರಿನ 1,200 ಚದುರ ಅಡಿಗಿಂತ ಹೆಚ್ಚಿನ ವಿಸ್ತೀರ್ಣದ ಕಟ್ಟಡ ಮಾಲೀಕರಿಗೆ ಸರ್ಕಾರ ಗುಡ್ ನ್ಯೂಸ್