ಕಲಬುರಗಿ : ಜಿಲ್ಲೆಯ ಸೇಡಂ ತಾಲೂಕಿನ ಇಮಡಾಪೂರ ಗ್ರಾಮದ ಸ್ವಯಂ ಘೋಷಿತ ಮುತ್ಯಾ ನೀಡಿದ ನಾಟಿ ಔಷಧ ಸೇವಿಸಿ ಸಾವನ್ನಪ್ಪಿದವರ ಕುಟುಂಬಕ್ಕೆ ಸರಕಾರ ತ್ವರಿತವಾಗಿ ಪರಿಹಾರ ನೀಡಬೇಕು ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸೇಡಂ ತಾಲೂಕಿನ ಬುರಗಪಲ್ಲಿ ಗ್ರಾಮದ ನಿವಾಸಿ ಲಕ್ಷ್ಮಿ ನರಸಿಂಹಲು ಪಲ್ಲಾ (55), ಮದಕಲ್ ಗ್ರಾಮದ ನಾಗೇಶ ಗಡುಬು (31) ಶಹಾಬಾದನ ಡಕ್ಕಾ ತಂಡಾ ನಿವಾಸಿ ಗಣೇಶ ರಾಠೋಡ್ (30), ಚಿತ್ತಾಪುರ ತಾಲೂಕಿನ ಭೀಮನಳ್ಳಿ ತಾಂಡಾದ ಮನೋಹರ್ ಚಹ್ವಾಣ (35) ನಾಟಿ ಔಷಧಿ ಪಡೆದು ಸಾವಿನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಇವರನ್ನು ಹೊರತುಪಡಿಸಿ ಹಿಂದೆಯೂ ಇದೇ ಇಮಡಾಪೂರದ ಸ್ವಯಂ ಘೋಷಿತ ಮುತ್ಯಾ ನೀಡಿದ ನಾಟಿ ಔಷಧಿ ಸೇವಿಸಿ ಸಾವಿನಪ್ಪಿರುವ ಬಗ್ಗೆ ಸಾರ್ವಜನಿಕರಿಂದ ತಿಳಿದು ಬಂದಿದೆ. ಈ ಬಗ್ಗೆ ಸಂಪೂರ್ಣ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಈ ರೀತಿ ಔಷಧಿ ಸೇವಿಸಿ ಎಷ್ಟು ಜನ ಇಲ್ಲಿಯವರೆಗೆ ಮೃತಪಟ್ಟಿದ್ದಾರೆ ಎನ್ನುವುದು ಪೊಲೀಸರು ತನಿಖೆಯಿಂದ ಬಹಿರಂಗ ಪಡಿಬೇಕು ಎಂದು ಆಗ್ರಹಿಸಿದರು.
ಸರಕಾರ ಜನರಲ್ಲಿ ಜಾಗೃತಿ ಮೂಡಿಸಿ
ಈ ರೀತಿ ಅವೈಜ್ಞಾನಿಕವಾಗಿ ನಾಟಿ ಔಷಧಿ ನೀಡುವವರ ಬಗ್ಗೆ ಸರಕಾರ ಮತ್ತು ಆರೋಗ್ಯ ಇಲಾಖೆ ಪರಿಶೀಲನೆ ನಡೆಸಿ, ಈ ರೀತಿಯ ಯಾವುದೇ ರೀತಿಯ ಸಂಶೋಧನೆಗೆ ಒಳಪಡದ ಔಷಧಿ ನೀಡುತ್ತಿರುವವ ಮೇಲೆ ಕ್ರಮ ಕೈಗೊಳ್ಳಬೇಕು. ಮತ್ತು ಈ ರೀತಿಯ ಔಷಧಿ ತೆಗೆದುಕೊಳ್ಳದಂತೆ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಸರಕಾರ ಮಾಡಬೇಕು ಎಂದು ಹೇಳಿದರು.
ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಿ
ಯಾವುದೇ ರೀತಿಯ ಅಧ್ಯಯನ ಇಲ್ಲದ ಸ್ವಯಂ ಘೋಷಿತ ಮುತ್ಯಾ ನೀಡಿದ ನಾಟಿ ಔಷಧಿ ಸೇವಿಸಿ ಮೃತಪಟ್ಟವರ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರ ಸರಕಾರ ನೀಡಬೇಕು. ಈ ನಿಟ್ಟಿನಲ್ಲಿ ಸೇಡಂ ಮತಕ್ಷೇತ್ರದ ಶಾಸಕ ಹಾಗೂ ಸಚಿವರಾದ ಶರಣಪ್ರಕಾಶ್ ಪಾಟೀಲ್ ಅವರು ವಿಶೇಷ ಕಾಳಜಿ ವಹಿಸಿ ಸಿಎಂ ಪರಿಹಾರ ನಿಧಿಯಿಂದ ಪರಿಹಾರ ಒದಗಿಸುವ ಕೆಲಸ ತ್ವರಿತವಾಗಿ ಮಾಡಬೇಕು.
ನಿಷ್ಪಕ್ಷಪಾತ ತನಿಖೆ ನಡೆಸಿ
ಯಾವುದೇ ರೀತಿಯ ನಾಟಿ ವೈದ್ಯ ಪದ್ದತಿಯ ಬಗ್ಗೆ ಜ್ಞಾನವಿಲ್ಲದೆ ಜನರ ಜೀವದ ಜೊತೆಗೆ ಚಲ್ಲಾಟವಾಡಿದ ಸ್ವಯಂ ಘೋಷಿತ ಮುತ್ಯಾ ಮತ್ತು ಅವನ ಹಿಂದೆ ಇರುವವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು. ಇವರ ಹಿಂದೆ ಯಾರೇ ಇದ್ದರು ಯಾವ ಒತ್ತಡಕ್ಕೂ ಒಳಗಾಗದೆ ನಿಖರವಾಗಿ ತನಿಖೆ ನಡೆಸಿ ಕಾನೂನು ರೀತಿಯಲ್ಲಿ ಶಿಕ್ಷೆ ಕೊಡಿಸುವ ಕೆಲಸ ಪ್ರಾಮಾಣಿಕವಾಗಿ ಪೊಲೀಸರು ಮಾಡಬೇಕು ಎಂದು ತೇಲ್ಕೂರ ಆಗ್ರಹಿಸಿದ್ದಾರೆ.