ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆ ಕೊಡಿಯಾಲಬೈಲ್‌ನಲ್ಲಿರುವ ಮಂಗಳೂರು ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಮೊಬೈಲ್ ಹಾಗೂ ಇಂಟರ್ನೆಟ್ ಬಳಕೆಗೆ ಸಮಸ್ಯೆ ಆಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಅಳವಡಿಸಲಾಗಿರುವ ಮೊಬೈಲ್ ಜಾಮರ್‌ಗಳ ಸಾಮರ್ಥ್ಯ ಮಿತಿಯನ್ನು ಕಾರಾಗೃಹಕ್ಕೆ ಸೀಮಿತಗೊಳಿಸುವಂತೆ ಕೇಂದ್ರ ಸರಕಾರ ಸ್ವಾಮ್ಯದ ಸಂಸ್ಥೆಯಾದ ಮೆಸರ್ಸ್ ಟೆಲಿಕಮ್ಯುನಿಕೇಷನ್ಸ್ ಕನ್ಸಲೆಂಟ್ಸ್ ಇಂಡಿಯಾ ಲಿಮಿಟೆಡ್‌ಗೆ ಹೈಕೋರ್ಟ್ ನಿರ್ದೇಶಿಸಿದೆ.
ನ್ಯಾಯಾಲಯದಲ್ಲಿ ಸಂವಹನಕ್ಕೆ ಅಡ್ಡಿಪಡಿಸುತ್ತಿರುವ ಜಾಮರ್‌ಗಳನ್ನು ತಕ್ಷಣವೇ ತೆರವುಗೊಳಿಸಲು ಗೃಹ ಇಲಾಖೆ ಹಾಗೂ ಕಾರಾಗೃಹದ ಅಧಿಕಾರಿಗಳಿಗೆ ನಿರ್ದೇಶಿಸುವಂತೆ ಕೋರಿ ಮಂಗಳೂರು ವಕೀಲರ ಸಂಘ ಮತ್ತದರ ಅಧ್ಯಕ್ಷ ಎಚ್.ವಿ. ರಾಘವೇಂದ್ರ ಹಾಗೂ ಕಾರ್ಯದರ್ಶಿ ಶ್ರೀಧರ ಹೊಸಮನೆ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ಅರ್ಜಿಯಲ್ಲಿ ಹೇಳಲಾಗಿರುವ ಸಮಸ್ಯೆ ಕುರಿತು ತಾಂತ್ರಿಕ ವರದಿ ಸಲ್ಲಿಸುವಂತೆ ಕೇಂದ್ರ ಸರಕಾರದ ಸಂವಹನ ಸಚಿವಾಲಯಕ್ಕೆ ಸೂಚಿಸಲಾಗಿತ್ತು. ಅದರಂತೆ ಸಚಿವಾಲಯದ ವೈರ್‌ಲೆಸ್ ಮಾನಿಟರಿಂಗ್ ಸಂಸ್ಥೆ ವರದಿ ಸಲ್ಲಿಸಿದೆ. ಈ ವರದಿ ಪರಿಶೀಲಿಸಿದಾಗ ಜೈಲು ಆವರಣದೊಳಗೆ ಜಾಮರ್ ಸಿಗ್ನಲ್ ಸಾಮರ್ಥ್ಯವು ಅಂದಾಜು 70 ಡಿಬಿಎಂ (ಡೆಸಿಬೆಲ್ ಮಿಲಿವಾಟ್ಸ್) ಎಂದು ಸೂಚಿಸುತ್ತದೆ. ಅದಾಗ್ಯೂ, ಈ ಸಾಮರ್ಥ್ಯ ಮಿತಿಯು ಜೈಲು ಆವರಣದ ಗಡಿಯನ್ನು ದಾಟಿದೆ ಮತ್ತು 900 ಮೀಟರ್‌ನಲ್ಲಿ ಜಾಮರ್ ಸಾಮರ್ಥ್ಯ -80 ಡಿಬಿಎಂ ಮತ್ತು 2.5 ಕಿಮೀ ವರೆಗೆ -100 ಡಿಬಿಎಂ ಆಗಿದೆ ಎಂಬುದನ್ನು ಪರಿಗಣಿಸಿ, ನ್ಯಾಯಪೀಠ ಈ ನಿರ್ದೇಶನ ನೀಡಿತು.








