ಮಂಡ್ಯ: ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ಪುನರ್‌ರಚನೆಯ ಚರ್ಚೆಗಳು ತೀವ್ರಗೊಂಡ ಬೆನ್ನಲ್ಲೇ, ಮಂಡ್ಯದಲ್ಲಿ ಶಾಸಕ ಗಣಿಗ ರವಿಕುಮಾರ್ ಅವರು ನೀಡಿರುವ ಹೇಳಿಕೆಗಳು ಕಾಂಗ್ರೆಸ್ ವಲಯದಲ್ಲಿ ಸಂಚಲನ ಮೂಡಿಸಿವೆ. ಸಚಿವ ಸ್ಥಾನದ ಆಕಾಂಕ್ಷಿಗಳು ದೆಹಲಿ ಯಾತ್ರೆ ನಡೆಸುತ್ತಿರುವ ಬೆನ್ನಲ್ಲೇ ಅವರು ಹಿರಿಯ ಮತ್ತು ಕಾರ್ಯನಿರ್ವಹಿಸದ ಸಚಿವರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಸುದ್ದಿಯ ಮುಖ್ಯಾಂಶಗಳು:
-
ಹೊಸಬರಿಗೆ ಸಚಿವ ಸ್ಥಾನದ ಬೇಡಿಕೆ: ಸಚಿವ ಸ್ಥಾನಕ್ಕೆ ಕೇವಲ ಹಿರಿಯರಷ್ಟೇ ಅಲ್ಲ, ಮೊದಲ ಬಾರಿಗೆ ಶಾಸಕರಾದವರಿಗೂ ಅವಕಾಶ ಸಿಗಬೇಕು ಎನ್ನುವುದು ನಮ್ಮ ಪ್ರಬಲ ಆಗ್ರಹ. ಈ ನಿಟ್ಟಿನಲ್ಲಿ 38 ಮಂದಿ ಶಾಸಕರು ಸೇರಿ ಹೈಕಮಾಂಡ್‌ಗೆ ಪತ್ರ ನೀಡಿದ್ದೇವೆ. ಕನಿಷ್ಠ 5 ಮಂದಿ ಹೊಸಬರಿಗೆ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ರವಿಕುಮಾರ್ ಒತ್ತಾಯಿಸಿದ್ದಾರೆ.
-
ಹಾಲಿ ಸಚಿವರ ವಿರುದ್ಧ ಕಿಡಿ: ಕೆಲವು ಸಚಿವರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಮತ್ತು ಸಾರ್ವಜನಿಕರಿಗೆ ಸಿಗುತ್ತಿಲ್ಲ ಎಂದು ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. “ಕೆಲವು ಸಚಿವರು ಫೋನ್‌ಗೂ ಸಿಗುವುದಿಲ್ಲ, ಅವರು ದೇವಲೋಕದಿಂದ ಬಂದವರ ಹಾಗೆ ಇದ್ದಾರೆ. ಅಂತಹವರನ್ನು ಬದಲಾವಣೆ ಮಾಡಿ ಹೊಸಬರಿಗೆ ಅವಕಾಶ ನೀಡುವುದು ಪಕ್ಷಕ್ಕೆ ಒಳ್ಳೆಯದು” ಎಂದು ಅವರು ನೇರವಾಗಿಯೇ ಟೀಕಿಸಿದ್ದಾರೆ.
-
ಮಂಡ್ಯ ಜಿಲ್ಲೆಯ ಸೀನಿಯರ್ಸ್: ಮಂಡ್ಯ ಜಿಲ್ಲೆಯಲ್ಲಿ ನರೇಂದ್ರಸ್ವಾಮಿ ಮತ್ತು ರಮೇಶ್ ಬಂಡಿಸಿದ್ದೇಗೌಡ ಅವರು ಹಿರಿಯ ಶಾಸಕರಾಗಿದ್ದಾರೆ. ಹೈಕಮಾಂಡ್ ಸಂಪುಟ ಪುನರ್‌ರಚನೆ ನಿರ್ಧಾರ ಕೈಗೊಂಡರೆ ಇವರಿಗೂ ಅವಕಾಶ ಸಿಗುವ ಸಾಧ್ಯತೆ ಇದೆ. ಆದರೆ ತನಗೆ ವೈಯಕ್ತಿಕವಾಗಿ ಸಚಿವ ಸ್ಥಾನ ಬೇಡ ಎಂದು ರವಿಕುಮಾರ್ ಸ್ಪಷ್ಟಪಡಿಸಿದ್ದಾರೆ.
ಮಂಡ್ಯದಲ್ಲಿ ಶೀಘ್ರವೇ ‘ಆಪರೇಷನ್ ಹಸ್ತ’? ಸಚಿವ ಸ್ಥಾನದ ಚರ್ಚೆಯ ನಡುವೆಯೇ ‘ಆಪರೇಷನ್ ಹಸ್ತ’ದ ಕುರಿತು ಗಣಿಗ ರವಿಕುಮಾರ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. “ಮುಂದಿನ ಎರಡು ತಿಂಗಳಲ್ಲಿ ಬಹಳಷ್ಟು ಬದಲಾವಣೆಗಳನ್ನು ನೀವು ನೋಡಲಿದ್ದೀರಿ. ಬಿಜೆಪಿ ಮತ್ತು ಜೆಡಿಎಸ್‌ನಿಂದ ಸಾಕಷ್ಟು ನಾಯಕರು, ಮುಖಂಡರು ಮತ್ತು ಕಾರ್ಯಕರ್ತರು ಕಾಂಗ್ರೆಸ್ ಸೇರಲು ಸಜ್ಜಾಗಿದ್ದಾರೆ” ಎಂದು ಅವರು ಬಾಂಬ್ ಸಿಡಿಸಿದ್ದಾರೆ.
ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಅಭಿವೃದ್ಧಿ ಕಾರ್ಯಗಳನ್ನು ನೋಡಿ ವಿರೋಧ ಪಕ್ಷದ ನಾಯಕರು ಕಾಂಗ್ರೆಸ್ ಕಡೆ ಮುಖ ಮಾಡುತ್ತಿದ್ದಾರೆ. ಯಾರು ಕಾಂಗ್ರೆಸ್ ಸೇರಲಿದ್ದಾರೆ ಎನ್ನುವುದನ್ನು ಮುಂದಿನ ದಿನಗಳಲ್ಲಿ ಬಹಿರಂಗಪಡಿಸುತ್ತೇವೆ ಎಂದು ಅವರು ಹೇಳುವ ಮೂಲಕ ರಾಜಕೀಯ ಕುತೂಹಲವನ್ನು ಹೆಚ್ಚಿಸಿದ್ದಾರೆ.
ಎಚ್ಚರಿಕೆ: ಕೊಲೆಸ್ಟ್ರಾಲ್ ನಿಯಂತ್ರಿಸುವ ಈ ಮಾತ್ರೆಗಳಿಂದ ಕಿಡ್ನಿ ವೈಫಲ್ಯವಾಗಬಹುದು! ಸಂಶೋಧನೆಯಿಂದ ಶಾಕಿಂಗ್ ಮಾಹಿತಿ
ಸಂಗೀತದ ಬಹುದೊಡ್ಡ ಕೊಂಡಿ ಕಳಚಿದಂತಾಗಿದೆ: ಗಾಯಕಿ ಆಶಾ ಭೋಂಸ್ಲೆ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ








