ದಾವಣಗೆರೆ: ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರ ತಮ್ಮನ ಮಗ ಚಂದ್ರಶೇಖರ್ ಮೃತದೇಹವು ತುಂಗಾ ಕಾಲುವೆಯಲ್ಲಿ ಪತ್ತೆಯಾಗಿದ್ದು ಹಲವು ಅನುಮಾನಗಳನ್ನು ಎಡೆಮಾಡಿಕೊಟ್ಟಿದೆ. ಇದೀಗ ಕುಂದೂರಲ್ಲಿ ಚಂದ್ರಶೇಖರ್ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ.
ಈಗಾಗಲೇ ಹುಟ್ಟೂರು ಕುಂದೂರಿನಲ್ಲಿ ಅಂತ್ಯಕ್ರಿಯೆ ನಡೆಸಲು ಎಲ್ಲ ಸಿದ್ಧತೆ ನಡೆದಿದೆ. ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಮಾಜಿ ಸಚಿವ ಈಶ್ವರಪ್ಪ ಸೇರಿದಂತೆ ಅನೇಕರು ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಇನ್ನು ಮೃತ ಚಂದ್ರಶೇಖರ್ ಅಂತಿಮಯಾತ್ರೆಗೆ ಸಿದ್ಧತೆ ನಡೆಸಲಾಗಿದೆ.
ದಾವಣಗೆರೆ ಎಸ್ ಪಿ ಸಿ.ಬಿ ರಿಷ್ಯಂತ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಹೇಳಿಕೆ ನೀಡಿದ್ದಾರೆ. ಚಂದ್ರಶೇಖರ್ ಸಾವಿನ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸುತ್ತೇವೆ. ಎಫ್ ಎಸ್ ಎಲ್ ತಜ್ಞರ ಜೊತೆ ಚರ್ಚಿಸಿದ್ದೇವೆ. ಎಫ್ ಎಸ್ ಎಲ್ ವರದಿ ನೋಡಿ ಏನಾಗಿದೆ ಎಂದು ತಿಳಿಸುತ್ತೇವೆ ಎಂದರು. ಅ. 31 ರಂದು ಚಂದ್ರಶೇಖರ್ ಕಾಣೆಯಾದ ಬಗ್ಗೆ ದೂರ ನೀಡಿದ್ದಾರೆ ಎಂದು ಹೊನ್ನಾಳಿ ಕಡದಕಟ್ಟೆ ಗ್ರಾಮದಲ್ಲಿ ಅಲೋಕ್ ಕುಮಾರ್ ಹೇಳಿದ್ದಾರೆ.