ಬೆಂಗಳೂರು : ಬೆಂಗಳೂರು ಜನತೆಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಬೆಂಗಳೂರು ನಗರ ಜಿಲ್ಲೆ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಹೊರವಲಯ ಗಡಿಭಾಗದ ಒಂದಷ್ಟು ಪಂಚಾಯಿತಿಗಳು, ಮುನ್ಸಿಪಾಲಿಟಿಗಳು ಭವಿಷ್ಯದಲ್ಲಿ ಬೆಂಗಳೂರು ನಗರದ ಒಳಗೆ ಸೇರುತ್ತವೆಯಾದ್ದರಿಂದ ಈಗಿನಿಂದಲೇ ಮಾನಸಿಕವಾಗಿ ತಯಾರು ಮಾಡಲಾಗುತ್ತಿದೆ. ಈ ಪ್ರದೇಶಗಳಲ್ಲಿಯೂ ಸಹ ಬಿ ಖಾತೆಯಿಂದ ಎ ಖಾತೆ ಪರಿವರ್ತನೆ ವ್ಯವಸ್ಥೆಗೆ ತಯಾರಿ ನಡೆಸಲು ಸೂಚನೆ ನೀಡಿದ್ದೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನೆ ಸಭೆ ನಂತರ ಮಾತನಾಡಿದ ಅವರು, ಭವಿಷ್ಯದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳಬೇಕಾದ ಬೆಂಗಳೂರು ಹೊರವಲಯದ ಪ್ರದೇಶಗಳ ಸಮೀಕ್ಷೆ ನಡೆಸಲು ಸೂಚಿಸಲಾಗಿದೆ. ಬೆಂಗಳೂರು ನಗರ ಜಿಲ್ಲೆಯ 12 ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಸಭೆ ನಡೆಸಲಾಯಿತು. ಭವಿಷ್ಯದಲ್ಲಿ ಬೆಂಗಳೂರು ಬೆಳೆಯಲಿದೆ. ಬಿಎಂಆರ್ಡಿಎ ವ್ಯಾಪ್ತಿಯ ಪ್ರದೇಶಗಳು ಇಂದಲ್ಲ ನಾಳೆ ಬೆಂಗಳೂರು ನಗರದ ಭಾಗವಾಗಲಿವೆ ಎಂದರು.
ಈಗಿನಿಂದಲೇ ಅಕ್ರಮ ಕಟ್ಟಡಗಳ ನಿರ್ಮಾಣಕ್ಕೆ ಕಡಿವಾಣ ಹಾಕಬೇಕು ಎಂದು ಸೂಚನೆ ನೀಡಿದ್ದೇನೆ. ಏಕೆಂದರೆ ಮುಂದೆ ನಾವೇ ನೀರು ಮತ್ತಿತರ ಮೂಲಸೌಕರ್ಯಗಳನ್ನು ನೀಡಬೇಕಾಗುತ್ತದೆ. ಆದ ಕಾರಣ ಅಕ್ರಮ ಕಟ್ಟಡ, ಬಡಾವಣೆ ನಿರ್ಮಾಣ ಯೋಜನೆಗಳಿಗೆ ಕಡಿವಾಣ ಹಾಕಬೇಕಿದೆ. ಕಾನೂನಿನ ಪ್ರಕಾರ ನಡೆದುಕೊಳ್ಳಬೇಕು ಎಂದು ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.








