ಬೆಂಗಳೂರು : ‘ಪ್ರೀಮಿಯಂ ಎಫ್ಎಆರ್’ ಖರೀದಿ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸುವ ಮಸೂದೆಗೆ ವಿಧಾನ ಪರಿಷತ್ತಿನಲ್ಲಿ ಸುದೀರ್ಘ ಚರ್ಚೆ ಹಾಗೂ ಬಿಜೆಪಿ ಸದಸ್ಯರ ಸಭಾತ್ಯಾಗದ ನಡುವೆ ಗುರುವಾರ ಅಂಗೀಕಾರ ದೊರೆಯಿತು.
ಬೆಂಗಳೂರು ನಗರಾಭಿವೃದ್ಧಿ ಖಾತೆ ಹೊಂದಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ವಿಧಾನಸಭೆಯಲ್ಲಿ ಅಂಗೀಕಾರ ಸ್ವರೂಪದಲ್ಲಿರುವ ‘ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ) ಮಸೂದೆ-2024’ ಅನ್ನು ವಿಧಾನ ಪರಿಷತ್ನಲ್ಲಿ ಮಂಡಿಸಿದರು.
ಮಾರ್ಗಸೂಚಿ ದರದ ಶೇ 40 ರಷ್ಟು ಶುಲ್ಕವನ್ನು ಸ್ಥಳೀಯ ಯೋಜನಾ ಪ್ರಾಧಿಕಾರ ಅಥವಾ ನಗರ ಸ್ಥಳೀಯ ಸಂಸ್ಥೆಗಳಿಗೆ ಪಾವತಿಸುವ ಮೂಲಕ ಬಹುಮಹಡಿ ಕಟ್ಟಡಗಳಲ್ಲಿ ಹೆಚ್ಚುವರಿ ಅಂತಸ್ತುಗಳನ್ನು ನಿರ್ಮಿಸಬಹುದು ಹಾಗೂ ಎಫ್ಎಆರ್ ಗಳನ್ನು ಬೇರೆಯವರಿಗೆ ಮಾರಾಟ ಮಾಡುವ ಅವಕಾಶವನ್ನು ಈ ಮಸೂದೆಯಲ್ಲಿ ಕಲ್ಪಿಸಲಾಗಿದೆ.
ಪ್ರೀಮಿಯಂ ಎಫ್ಎಆರ್ ಮಿತಿಯನ್ನು ಶೇ 0.4 ಕ್ಕೆ ನಿಗದಿಪಡಿಸಲಾಗಿದೆ. ಹಾಗೂ ಟಿಡಿಆರ್ (Transferable Development Rights) ಬಳಸಿ ನಿರ್ಮಿಸಿರುವ ಕಟ್ಟಡದ ಎಫ್ಎಆರ್ ಮಿತಿಯು ಶೇ 0.6 ರಷ್ಟನ್ನು ಮೀರುವಂತಿಲ್ಲ ಎಂದು ಹೇಳಲಾಗಿದೆ. ಇದರಿಂದಾಗಿ ಸ್ಥಳೀಯ ಸಂಸ್ಥೆಗಳ ಆದಾಯ ಹೆಚ್ಚಾಗುತ್ತದೆ ಮತ್ತು ಅಭಿವೃದ್ದಿ ಕಾರ್ಯಗಳಿಗೆ ವಿನಿಯೋಗವಾಗುತ್ತದೆ. ಎಫ್‌ಎಆರ್‌ಗಳ ಮಾರಾಟದಿಂದ ಸಂಗ್ರಹವಾಗುವ ಶುಲ್ಕವನ್ನು ಭೂಸ್ವಾಧೀನ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಿಕೊಳ್ಳಬಹುದು ಎಂದು ತಿಳಿಸಲಾಗಿದೆ.
ನಿವೇಶನದ ಅಳತೆ ಮತ್ತು ಮುಂದಿರುವ ರಸ್ತೆಯ ಅಳತೆ ಮೇಲೆ ಇಂತಿಷ್ಟು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಬಹುದು ಎಂದು ಅಳತೆ ಮಾಡಿ ಅನುಮತಿ ನೀಡಲಾಗುತ್ತಿತ್ತು. ಈ ಮಸೂದೆಯಿಂದಾಗಿ ಕಟ್ಟಡ ನಿರ್ಮಿಸುವವರು ಪ್ರೀಮಿಯಂ ಎಫ್ಎಆರ್‌ಗಳನ್ನು ಖರೀದಿಸಿ, ಕಟ್ಟಡದ ನಿವೇಶನದ ಅಳತೆಗಿಂತ ಹೆಚ್ಚುವರಿ ಅಂತಸ್ತುಗಳನ್ನು ನಿರ್ಮಿಸಿಕೊಳ್ಳಬಹುದು.
ಆಡಳಿತ ಪಕ್ಷದ ಸದಸ್ಯ ನಾಗರಾಜ್ ಯಾದವ್ ಮಾತನಾಡಿ “ಹಳೆಯ ಕಾನೂನಿಗೆ ಹೊಸ ರೂಪ ನೀಡಿರುವುದು ಸ್ವಾಗತಾರ್ಹ. ಸ್ಥಳೀಯ ಸಂಸ್ಥೆಗಳಿಗೆ ಅನುಮತಿ ನೀಡುವ ಅಧಿಕಾರ ನೀಡಿರುವ ಕಾರಣ ಕೆಲಸದ ವಿಳಂಬ ತಪ್ಪುತ್ತದೆ” ಎಂದು ವಿಧೇಯಕಕ್ಕೆ ಬೆಂಬಲ ಸೂಚಿಸಿದರು.
“ಎಫ್ಎಆರ್ ಜಾರಿಯಿಂದ ಬಿಜೆಪಿ ಸದಸ್ಯ ಕೆ.ಎಸ್.ನವೀನ್ ತಿದ್ದುಪಡಿಯನ್ನು ಸ್ವಾಗತಿಸಿ “ಸಣ್ಣ ರಸ್ತೆಗಳು ಇರುವ ಕಡೆ ಜನದಟ್ಟಣೆ ಉಂಟಾಗುತ್ತದೆ ಮತ್ತು ಅಗ್ನಿ ಅವಘಡಗಳು ಉಂಟಾದಾಗ ತೊಂದರೆಯಾಗುತ್ತದೆ ಈ ಕುರಿತು ಸರ್ಕಾರ ಆಲೋಚಿಸಬೇಕು” ಎಂದು ಸಲಹೆ ನೀಡಿದರು
“ಬೆಂಗಳೂರಿನ ಮೂಲಸೌಕರ್ಯಗಳ ಮೇಲೆ ಒತ್ತಡ ಹೆಚ್ಚಾಗಲಿದೆ. ಆದ ಕಾರಣ ಸಮಿತಿ ರಚಿಸಿ ಮತ್ತೊಂದು ಸುತ್ತಿನ ಪರಾಮರ್ಶೆಯ ನಂತರ ಮತ್ತೊಮ್ಮೆ ಪ್ರೀಮಿಯಂ ಎಫ್ ಎಆರ್ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಲಿ” ಎಂದು ಬಿಜೆಪಿ ಸದಸ್ಯ ಕೇಶವಪ್ರಸಾದ್.ಎಸ್ ಸರ್ಕಾರಕ್ಕೆ ಆಗ್ರಹಿಸಿದರು. ಪರಾಮರ್ಶನ ಸಮಿತಿ ರಚಿಸುವುದಕ್ಕೆ ಆಡಳಿತ ಪಕ್ಷದ ಸದಸ್ಯ ಎಂ.ಆರ್.ಸೀತಾರಾಂ ಅವರು ವಿರೋಧಿಸಿದರು.
ನಿಮ್ಮ ಎಲ್ಲಾ ಸಂಶಯಗಳಿಗೆ ಉತ್ತರ ಕೊಡುತ್ತೇನೆ
ವಿಧೇಯಕದ ಬಗ್ಗೆ ವಿಪಕ್ಷಗಳ ಸದಸ್ಯರು ತಕರಾರು ವ್ಯಕ್ತಪಡಿಸಿದಾಗ “ನಿಮ್ಮ ಎಲ್ಲಾ ಸಂಶಯಗಳಿಗೆ ನಾನು ಉತ್ತರ ನೀಡುತ್ತೇನೆ. ನಿಮ್ಮ ಎಲ್ಲಾ ಸಲಹೆಗಳನ್ನು ಸ್ವೀಕರಿಸಲು ತಯಾರಿದ್ದೇನೆ. ನೀವು ಮಾಡಿದ ಕಾನೂನನ್ನೇ ಸರಳೀಕರಣ ಮಾಡಿ ಕರ್ನಾಟಕದ ಎಲ್ಲಾ ಭಾಗದ ಜನರು ಇದರ ಉಪಯೋಗ ಪಡೆಯಲಿ ಮತ್ತು ಸ್ಥಳೀಯ ಸಂಸ್ಥೆಗಳ ಆದಾಯ ಹೆಚ್ಚಾಗಲಿ ಎನ್ನುವುದಷ್ಟೇ ನಮ್ಮ ಉದ್ದೇಶ. ಬೊಮ್ಮಾಯಿ ಅವರ ಸರ್ಕಾರವೂ ಇದನ್ನು ತಿದ್ದುಪಡಿ ಮಾಡಲು ಹೊರಟಿತ್ತು” ಎಂದು ಡಿಸಿಎಂ ಶಿವಕುಮಾರ್ ಅವರು ಉತ್ತರಿಸಿದರು.
“ಈಗಾಗಲೇ ಈ ಕಾನೂನು ಇದೆ. ನಾವು ಹೊಸದಾಗಿ ತರಲು ಮುಂದಾಗಿಲ್ಲ. ಸ್ಥಳೀಯ ಸಂಸ್ಥೆಗಳು ಸಹ ಇದರ ಉಪಯೋಗ ಪಡೆದುಕೊಳ್ಳಲಿ ಎಂದು ತಿದ್ದುಪಡಿ ಮಾಡಿದ್ದೇವೆ. ಮಂಗಳೂರಿನಲ್ಲಿ ಪ್ರೀಮಿಯಂ ಎಫ್ ಎಆರ್ ಜಾರಿಯಾಗಿತ್ತು. ಇದರಿಂದಾಗಿ ಕಳೆದ 5-6 ವರ್ಷಗಳಲ್ಲಿ 2-3 ಸಾವಿರ ಕೋಟಿಯಷ್ಟು ಆದಾಯ ಬಂದಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಕಡೆ ಈ ಅವಕಾಶ ಕಲ್ಪಿಸಲು ವಿಧೇಯಕಕ್ಕೆ ತಿದ್ದುಪಡಿ ಮಾಡಲಾಗಿದೆ” ಎಂದು ಡಿಸಿಎಂ ಹೇಳಿದರು.
ಈ ಬಿಲ್ ಅನ್ನು ತಡೆ ಹಿಡಿದು, ಹೆಚ್ಚಿನ ಚರ್ಚೆ ನಡೆಸುವುದು ಉತ್ತಮ. ಎಲ್ಲರೊಟ್ಟಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿ ಪುನಃ ಮಂಡನೆ ಮಾಡಿ. ಇದರಿಂದ ಅಧಿಕಾರಿಗಳ ಕೈಗೆ ಎಲ್ಲಾ ಅಧಿಕಾರಗಳನ್ನುನೀಡಿದಂತಾಗುತ್ತದೆ” ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರು ವಿಧೇಯಕವನ್ನು ವಿರೋಧಿಸಿ ಸಭಾತ್ಯಾಗ ಮಾಡಿದರು.
ಬಿಬಿಎಂಪಿ ಆಸ್ತಿ ತೆರಿಗೆ ತಿದ್ದುಪಡಿ ವಿಧೇಯಕ ವಿಧಾನ ಪರಿಷತ್ತಿನಲ್ಲಿ ಅಂಗೀಕಾರ
ಬಿಬಿಎಂಪಿ ವ್ಯಾಪ್ತಿಯಲ್ಲಿ ಬಾಕಿ ಉಳಿಸಿಕೊಂಡಿರುವ ಆಸ್ತಿ ತೆರಿಗೆ ಮೇಲಿನ ದಂಡದ ಪ್ರಮಾಣ ಶೇಕಡ 50 ರಷ್ಟು ಕಡಿತ ಸೇರಿದಂತೆ ಜನಸ್ನೇಹಿ ಬಿಬಿಎಂಪಿ (ತಿದ್ದುಪಡಿ) ವಿಧೇಯಕ 2024 ಅನ್ನು ವಿಧಾನ ಪರಿಷತ್ತಿನಲ್ಲಿ ಗುರುವಾರ ಅಂಗೀಕರಿಸಲಾಯಿತು.
ಬೆಂಗಳೂರು ನಗರಾಭಿವೃದ್ದಿ ಖಾತೆಯನ್ನೂ ಹೊಂದಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ವಿಧಾನ ಪರಿಷತ್ ನಲ್ಲಿ ಬಿಬಿಎಂಪಿ ಆಸ್ತಿ ತೆರಿಗೆ ತಿದ್ದುಪಡಿ ವಿಧೇಯಕವನ್ನು ಮಂಡಿಸಿ ಮಾತನಾಡಿದರು.
ಈ ವಿಧೇಯಕ ಈಗಾಗಲೇ ವಿಧಾನಸಭೆಯಲ್ಲಿ ಅಂಗೀಕಾರವಾಗಿದೆ.
2020 ರಲ್ಲಿ ಬಿಜೆಪಿ ಸರ್ಕಾರ ತಿಳಿಯದೇ ಮಾಡಿದ್ದ ತಪ್ಪಿನಿಂದ ಜನಸಾಮಾನ್ಯರ ಮೇಲೆ ತೆರಿಗೆ ಹೊರೆ ಹೆಚ್ಚಾಗುತ್ತಿತ್ತು. ನಮ್ಮ ಸರ್ಕಾರ ಈ ಭಾರವನ್ನು ಇಳಿಸಿದೆ.
ಆಸ್ತಿ ತೆರಿಗೆ ತಕರಾರು ಇದ್ದವರು ಈ ಮೊದಲು ಟ್ರಿಬ್ಯುನಲ್ ಅಥವಾ ಹೈಕೋರ್ಟ್ ಗೆ ಹೋಗಬೇಕಿತ್ತು. ಈ ತೊಂದರೆಯನ್ನು ತಪ್ಪಿಸಲು ಮೇಲ್ಮನವಿ ಸಮಿತಿ ರಚಿಸಿದ್ದು, ಜನರು ಕೋರ್ಟಿಗೆ ಅಲೆಯುವುದು ತಪ್ಪಲಿದೆ.
ಆಸ್ತಿ ತೆರಿಗೆಯನ್ನು ಆಸ್ತಿಯ ಮೌಲ್ಯಕ್ಕೆ ತಕ್ಕಂತೆ ಮಾಡಬೇಕು ಆಗ ಮಾತ್ರ 15 ನೇ ಹಣಕಾಸು ಆಯೋಗದಿಂದ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ನಿಯಮ ರೂಪಿಸಿದೆ. ಈ ಕಾರಣದಿಂದ ತಿದ್ದುಪಡಿಗೆ ಸರ್ಕಾರ ಮುಂದಾಯಿತು. ರಾಜ್ಯದ ಇತರೇ ಜಿಲ್ಲೆಗಳಲ್ಲಿ ಆಸ್ತಿ ಮೌಲ್ಯ ಆಧರಿಸಿ ಆಸ್ತಿ ತೆರಿಗೆ ನಿರ್ಧರಿಸಲಾಗಿತ್ತು. ಬೆಂಗಳೂರಿನಲ್ಲಿ ಮಾತ್ರ ವ್ಯತ್ಯಾಸವಿದ್ದ ಕಾರಣ ಆಸ್ತಿ ತೆರಿಗೆ ಹೆಚ್ಚಳ ಮಾಡದೆ, ಹೊಸ ತಿದ್ದುಪಡಿ ಮಾಡಲಾಗಿದೆ.
ತಿದ್ದುಪಡಿ ವಿಧೇಯಕವನ್ನು ಆಡಳಿತ ಪಕ್ಷದ ನಾಗರಾಜ್ ಯಾದವ್ ಮುಕ್ತಕಂಠದಿಂದ ಶ್ಲಾಘಿಸಿ, “ಜನಸ್ನೇಹಿ ತೆರಿಗೆಯಿಂದ ಬಿಬಿಎಂಪಿಗೆ ಆದಾಯ ಹೆಚ್ಚಾಗಲಿದೆ. ಬೆಂಗಳೂರು ನಗರದ ಅಭಿವೃದ್ದಿಗೆ ಪ್ರಗತಿಪರವಾದ ವಿಧೇಯಕವಾಗಿದೆ” ಎಂದರು.
“ಸ್ವಯಂ ಘೋಷಿತ ಆಸ್ತಿ ತೆರಿಗೆ ವೇಳೆ ತಪ್ಪುಮಾಹಿತಿ ನೀಡಿದವರಿಗೆ ಒಂದಷ್ಟು ವಿನಾಯಿತಿ ನೀಡಬೇಕು ಅಥವಾ ಒಂದು ಬಾರಿ ಪಾವತಿ ಮಾಡುವ ಅವಕಾಶ ನೀಡಬೇಕು” ಎಂದು ಜೆಡಿಎಸ್ ಸದಸ್ಯ ಟಿ.ಎ. ಶರವಣ ಸಲಹೆ ನೀಡಿದರು.
ನಗರದ ಒಳಗೆ ಇರುವ ಕೃಷಿ ಭೂಮಿ, ಪರಿವರ್ತಿತ ಭೂಮಿ ಸೇರಿದಂತೆ ಮಾರ್ಗಸೂಚಿ ದರ ವಿಚಾರವಾಗಿ ಹೆಚ್ಚಿನ ಸದಸ್ಯರು ಪ್ರಶ್ನಿಸಿದಾಗ “110 ಹಳ್ಳಿಗಳು ಸೇರಿದಂತೆ ಪಾಲಿಕೆಯ ವ್ಯಾಪ್ತಿಯ ಕೃಷಿ ಭೂಮಿಗಳಿಗೆ ಯಾವುದೇ ತೆರಿಗೆ ಇಲ್ಲ. ಪರಿವರ್ತಿತ ಭೂಮಿಗೆ ಶೇ 0.025 ಮಾತ್ರ ತೆರಿಗೆ ವಿಧಿಸಲಾಗುವುದು. ಮಾರ್ಗಸೂಚಿ ದರವನ್ನು ನಿರ್ಧಾರ ಮಾಡುವುದು ಕಂದಾಯ ಇಲಾಖೆ. ಇದನ್ನು ವರ್ಷಕ್ಕೆ ಕೇವಲ ಶೇ 5 ರಷ್ಟು ಮಾತ್ರ ಹೆಚ್ಚಳ ಮಾಡಲು ಅವಕಾಶವಿದೆ” ಎಂದು ಶಿವಕುಮಾರ್ ಅವರು ಉತ್ತರಿಸಿದರು.
ಸುದೀರ್ಘ ಚರ್ಚೆಯ ವೇಳೆ ವಿರೋಧ ಪಕ್ಷದ ಸದಸ್ಯರು ತಮ್ಮ ಸಲಹೆ ಮಂಡಿಸಿ ಈ ತಿದ್ದುಪಡಿ ಮಸೂದೆಯನ್ನು ಸ್ವಾಗತಿಸಿದರು. ನಂತರ ಮಸೂದೆಯನ್ನು ಮತಕ್ಕೆ ಹಾಕಿ ಅಂಗೀಕರಿಸಲಾಯಿತು.
BIG Alert: ಪೋಷಕರೇ..! ನೀವು ಮಕ್ಕಳಿಗೆ ‘ಬಾಂಬೆ ಮಿಠಾಯಿ’ ಕೊಡಿಸ್ತಾ ಇದ್ದೀರಾ.? ಇಲ್ಲಿದೆ ‘ಶಾಕಿಂಗ್ ನ್ಯೂಸ್’
ALEART: ‘ಆ್ಯಂಟಿಬಯೋಟಿಕ್’ ಮಾತ್ರೆ ಸೇವನೆ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆಯಿಂದ ಮಹತ್ವದ ಎಚ್ಚರಿಕೆ!