ಕೆಎನ್ಎನ್ ಡಿಜಿಟಲ್ ಡೆಸ್ಕ್ : ಶ್ವೇತಭವನದಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಗರ್ಭಿಣಿಯರು ಪ್ಯಾರಾಸಿಟಮಾಲ್ ಬಳಸಬಾರದು ಎಂದು ಹೇಳಿದ್ದಾರೆ. ಗರ್ಭಾವಸ್ಥೆಯಲ್ಲಿ ಪ್ಯಾರೆಸಿಟಮಾಲ್ ತೆಗೆದುಕೊಳ್ಳುವುದರಿಂದ ಮಕ್ಕಳಲ್ಲಿ ಆಟಿಸಂ ಮತ್ತು ಎಡಿಎಚ್‌ಡಿ (ಗಮನ ಕೊರತೆ ಹೈಪರ್ಆಕ್ಟಿವಿಟಿ ಡಿಸಾರ್ಡರ್) ಅಪಾಯ ಹೆಚ್ಚಾಗುತ್ತದೆ ಎಂದು ಟ್ರಂಪ್ ವಾದಿಸಿದರು. ಸಧ್ಯ ಇದಕ್ಕೆ ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರತಿಕ್ರಿಯಿಸಿದೆ.
ಟ್ರಂಪ್ ಹೇಳಿಕೆ ತಿರಸ್ಕರಿಸಿದ WHO
ಗರ್ಭಾವಸ್ಥೆಯಲ್ಲಿ ಪ್ಯಾರಾಸಿಟಮಾಲ್ ತೆಗೆದುಕೊಳ್ಳುವುದರಿಂದ ಮಕ್ಕಳಲ್ಲಿ ಆಟಿಸಂ ಹೆಚ್ಚಾಗುತ್ತದೆ ಎಂಬುದಕ್ಕೆ ಇಲ್ಲಿಯವರೆಗೆ ಯಾವುದೇ ಪುರಾವೆಗಳಿಲ್ಲ ಎಂದಿದ್ದು, ಟ್ರಂಪ್ ಹೇಳಿಕೆಯನ್ನ WHO ನಿರಾಕರಿಸಿದೆ. ವೈದ್ಯರ ಸಲಹೆಯ ಮೇರೆಗೆ ಗರ್ಭಾವಸ್ಥೆಯಲ್ಲಿ ಪ್ಯಾರಸಿಟಮಾಲ್ ತೆಗೆದುಕೊಳ್ಳುವುದರಿಂದ ಸುರಕ್ಷಿತವಾಗಿದೆ ಎಂದು WHO ಹೇಳಿದೆ.
ವರದಿಯ ಪ್ರಕಾರ, WHO ವಕ್ತಾರ ತಾರಿಕ್ ಜಸರೆವಿಕ್ ಜಿನೀವಾದಲ್ಲಿ “ಲಸಿಕೆಗಳು ಆಟಿಸಂಗೆ ಕಾರಣವಾಗುವುದಿಲ್ಲ, ಅವು ಜೀವಗಳನ್ನ ಉಳಿಸುತ್ತವೆ. ಇದು ವಿಜ್ಞಾನವು ಸಾಬೀತುಪಡಿಸಿದ ವಿಷಯ. ಈ ವಿಷಯಗಳನ್ನ ನಿಜವಾಗಿಯೂ ಪ್ರಶ್ನಿಸಬಾರದು” ಎಂದು ಹೇಳಿದರು. ಟ್ರಂಪ್ ಅವರ ಹೇಳಿಕೆಗೆ ಯಾವುದೇ ಪುರಾವೆಗಳಿಲ್ಲ ಎಂದು ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ ಕೂಡ ಹೇಳಿದೆ.
ಗರ್ಭಿಣಿಯರಿಗೆ ಟ್ರಂಪ್ ಸಲಹೆ.!
ಗರ್ಭಿಣಿಯರಿಗೆ ಅಸೆಟಾಮಿನೋಫೆನ್ (ಪ್ಯಾರಾಸಿಟಮಾಲ್) ಲೇಬಲ್ ಮೇಲೆ ಎಚ್ಚರಿಕೆ ಸೇರಿಸಲು ಅಮೆರಿಕದ ಆಹಾರ ಮತ್ತು ಔಷಧ ಆಡಳಿತಕ್ಕೆ (ಎಫ್‌ಡಿಎ) ಆದೇಶಿಸುವುದಾಗಿ ಟ್ರಂಪ್ ಘೋಷಿಸಿದರು. ಗರ್ಭಿಣಿಯರು ಪ್ಯಾರಸಿಟಮಾಲ್ ಬಳಸದಂತೆ ಅವರು ಸಲಹೆ ನೀಡಿದರು. ಟ್ರಂಪ್ ತಮ್ಮ ಹೇಳಿಕೆಗಳನ್ನು ಉತ್ಪ್ರೇಕ್ಷಿಸಿದ್ದಾರೆ ಎಂದು ಅನೇಕ ತಜ್ಞರು ನಂಬುತ್ತಾರೆ.
ಪ್ಯಾರಾಸಿಟಮಾಲ್ ಆಟಿಸಂಗೆ ಕಾರಣವಾಗುತ್ತದೆ ಎಂಬುದಕ್ಕೆ ಎಫ್‌ಡಿಎ ಇನ್ನೂ ಯಾವುದೇ ಎಚ್ಚರಿಕೆ ನೀಡಿಲ್ಲ. ಟ್ರಂಪ್ ಅವರ ಹೇಳಿಕೆಯನ್ನ ಸಂಪೂರ್ಣವಾಗಿ ಸಾಬೀತುಪಡಿಸಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಎಫ್‌ಡಿಎ ಸ್ಪಷ್ಟಪಡಿಸಿದೆ. ಟ್ರಂಪ್ ಕೂಡ ಆಟಿಸಂಗೆ ಚಿಕಿತ್ಸೆ ನೀಡಬಲ್ಲ ‘ಪವಾಡ ಔಷಧ’ವನ್ನು ಕಂಡುಹಿಡಿದಿರುವುದಾಗಿ ಹೇಳಿಕೊಂಡಿದ್ದಾರೆ. ಈ ಕಾರ್ಯಾಚರಣೆಯನ್ನು ಅಮೆರಿಕದ ಆರೋಗ್ಯ ಕಾರ್ಯದರ್ಶಿ ರಾಬರ್ಟ್ ಎಫ್. ಕೆನಡಿ ಜೂನಿಯರ್ ನೇತೃತ್ವ ವಹಿಸಿದ್ದಾರೆ.