ಬೆಂಗಳೂರು: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ಪ್ರಗತಿ ಹಂತದಲ್ಲಿ ಇದೆ. ಆದೆಷ್ಟು ಬೇಗ ಹಂತಕರನ್ನು ಪತ್ತೆ ಹಚ್ಚಲಿದ್ದಾರೆ. ಇನ್ನೊಂದೆರಡು ಮೂರು ದಿನಗಳಲ್ಲಿ ಪ್ರಕರಣವನ್ನು ಎನ್ ಐಎಗೆ ವರ್ಗಾವಣೆ ಮಾಡುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಈಗಾಗಲೇ ಎನ್ ಐಎ ಕೇಸ್ ಬಗ್ಗೆ ಅನೌಪಚಾರಿಕವಾಗಿ ತಿಳಿಸಿದ್ದೇವೆ.ಇನ್ನು ಕೆಲವು ಎನ್ ಐಎ ಅಧಿಕಾರಿಗಳು ಕೇರಳ ಮತ್ತು ಮಂಗಳೂರಿನಲ್ಲಿ ಈಗಾಗಲೇ ಮಾಹಿತಿ ಪಡೆಯುತ್ತಿದ್ದಾರೆ ಎಂದಿದ್ದಾರೆ.
ಇನ್ನು ಇತ್ತೀಚೆಗೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಹತ್ಯೆಯಾದ ಬೆಳ್ಳಾರೆ ಮಸೂದ್ ಮತ್ತು ಸುರತ್ಕಲ್ ನ ಫಾಝಿಲ್ ಮನೆಗೆ ಮುಂದಿನ ದಿನಗಳಲ್ಲಿ ಭೇಟಿ ನೀಡುತ್ತೇನೆ ಎಂದರು.