ಬೆಂಗಳೂರು : ಕರ್ನಾಟಕ ಮಾತ್ರವಲ್ಲ ಇಡೀ ದೇಶವೇ ಬೆಚ್ಚಿ ಬೀಳಿಸುವಂತಹ ಪ್ರಜ್ವಲ್ ರೇವಣ್ಣ ಅವರ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿನ್ನೆ ಕೋರ್ಟ್ ಪ್ರಜ್ವಲ್ ರೇವಣ್ಣ ದೋಷಿ ಎಂದು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ತೀರ್ಪು ಪ್ರಕಟಿಸಿತ್ತು. ಆದರೆ ಶಿಕ್ಷೆ ಪ್ರಮಾಣ ಇಂದು ಪ್ರಕಟಿಸಲಿದೆ. ಹಾಗಾಗಿ ಇದೀಗ ಪ್ರಜ್ವಲ್ ರೇವಣ್ಣಗೆ ನ್ಯಾಯಾಲಯ ಎಷ್ಟು ವರ್ಷಗಳ ಕಾಲ ಶಿಕ್ಷೆ ಪ್ರಕಟಿಸಲಿದೆ ಎಂದು ಕಾದು ನೋಡಬೇಕಾಗಿದೆ.
ಮೈಸೂರಿನ ಕೆ.ಆರ್ ನಗರದ 47 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ ಸಂಬಂಧ ಶುಕ್ರವಾರ ಪ್ರಜ್ವಲ್ ರೇವಣ್ಣ ವಿರುದ್ಧ ಅಂತಿಮ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರದ ಸಂತೋಷ್ ಗಜಾನನ ಭಟ್ ಪ್ರಜ್ವಲ್ ರೇವಣ್ಣ ಅಪರಾಧಿ ಎಂದು ಪ್ರಕಟಿಸಿದ್ದು, ಶನಿವಾರ ಶಿಕ್ಷೆಯ ಪ್ರಮಾಣ ಪ್ರಕಟಿಸಲಾಗುವುದು.
ನ್ಯಾಯಾಲಯ ಅಪರಾಧಿ ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಈಗಾಗಲೇ ಒಂದು ವರ್ಷ ನಾಲ್ಕು ತಿಂಗಳಿನಿಂದ ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣ ಅವರಿಗೆ ಜೈಲುವಾಸ ಕಾಯಂ ಆಗಲಿದ್ದು, ಜಾಮೀನು ಸಿಗುವ ಬಾಗಿಲು ಮುಚ್ಚಲಿವೆ. ಒಂದು ವೇಳೆ ಅಪರಾಧ ಸಾಬೀತ್ ಆದರೆ ಕನಿಷ್ಠವೆಂದರು 10 ರಿಂದ 14 ವರ್ಷ ಜೈಲು ಶಿಕ್ಷೆ ಫಿಕ್ಸ್ ಎಂದು ಸರ್ಕಾರದ ಪರ ವಕೀಲ ಅಶೋಕ್ ನಾಯಕ್ ತಿಳಿಸಿದ್ದಾರೆ. ಜೀವಾವಧಿ ಶಿಕ್ಷೆ ಆದರೆ ಸನ್ನಡತೆ ಆಧಾರದ ಮೇಲೆ ಹೊರಗಡೆ ಬರಬಹುದು. ಆದರೆ ಕೋರ್ಟ್ ಜೀವಿತಾವಧಿ ಎಂದು ಕಠಿಣ ಶಿಕ್ಷೆ ನೀಡಿದರೆ ಪ್ರಜ್ವಲ್ ರೇವಣ್ಣ ಸಾಯುವವರೆಗೂ ಜೈಲಲ್ಲೇ ಇರಬೇಕಾಗುತ್ತದೆ.