ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ದೂರು ಕೊಟ್ಟ ವಕೀಲ ಪ್ರದೀಪ್ ಕುಮಾರ್ ಅವರಿಗೆ ಅನಾಮಧೇಯ ಬೆದರಿಕೆ ಕರೆಗಳು ಬರುತ್ತಿವೆ ಎನ್ನಲಾಗುತ್ತಿದೆ.
ಹೌದು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಪ್ರದೀಪ್ ಕುಮಾರ್ ದೂರು ಸೇರಿದಂತೆ ಮೂವರ ದೂರನ್ನು ಆಧರಿಸಿ ರಾಜ್ಯಪಾಲರು ಸಿಎಂ ಮೇಲೆ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದರು. ಆದರೆ, ಈಗ ಸಿದ್ದರಾಮಯ್ಯ ವಿರುದ್ದ ದೂರು ನೀಡಿದ್ದ ಪ್ರದೀಪ್ ಕುಮಾರ್ಗೆ ಬೆದರಿಕೆ ಕರೆಗಳ ಕಾಟ ಶುರುವಾಗಿದೆ. ನಾವು ಪೋಲೀಸರು, ನಾವು ಪತ್ರಕರ್ತರು, ನಾವು ಅಧಿಕಾರಿಗಳು ಎಂದೆಲ್ಲಾ ಹೇಳಿಕೊಂಡು ನಾನಾ ಹೆಸರಿನಲ್ಲಿ ಅನಾಮಧೇಯ ಮೊಬೈಲ್ ಕರೆಗಳು ಬರುತ್ತಿವೆ.
ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ ಎಂಬ ಆರೋಪ ಇರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ಟಿ.ಜೆ. ಅಬ್ರಾಹಂ, ಪ್ರದೀಪ್ ಕುಮಾರ್ ಹಾಗೂ ಸ್ನೇಹಮಯಿ ಕೃಷ್ಣ ದೂರು ನೀಡಿದ್ದಾರೆ. ಈ ಮೂವರೂ ರಾಜ್ಯಪಾಲರಾದ ಥಾವರ ಚಂದ್ ಗೆಹ್ಲೋಟ್ ಅವರಿಗೆ ಕೆಲವು ದಾಖಲೆಗಳ ಸಮೇತ ದೂರನ್ನು ನೀಡಿದ್ದ ಹಿನ್ನೆಲೆಯಲ್ಲಿ ಪ್ರಾಸಿಕ್ಯೂಷನ್ ನೀಡಲು ರಾಜ್ಯಪಾಲರು ಶೋಕಾಷ್ ನೋಟೀಸ್ ಜಾರಿ ಮಾಡಿದ್ದರು.
ಈ ವೇಳೆ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಎಲ್ಲಾ ಸಚಿವರು ಅವರ ಬೆನ್ನಿಗೆ ನಿಂತರು.ಆದರೆ ಕ್ಯಾಬಿನೆಟ್ ನಿರ್ಧಾರವನ್ನು ಲೆಕ್ಕಿಸದೆ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದರು. ಇದನ್ನು ಪ್ರಶ್ನೆಗೆ ಸಿದ್ದರಾಮಯ್ಯ ಇಂದು ಹೈಕೋರ್ಟಿಗೆ ರಿಟ್ ಅರ್ಜಿ ಸಲ್ಲಿಸಿದರು.
ಇಂದು ರಿಟ್ ಅರ್ಜಿ ವಿಚಾರಣೆ ಮಾಡಿದ ಹೈಕೋರ್ಟ್, ಸಿಎಂ ಸಿದ್ದರಾಮಯ್ಯ ಅವರ ಪ್ರಾಸಿಕ್ಯೂಷನ್ ವಿಚಾರಣೆಯ ತೀರ್ಪು ಬರುವುದಕ್ಕೂ ಮುನ್ನವೇ ರಿಟ್ ಅರ್ಜಿ ಇತ್ಯರ್ಥ ಆಗಬೇಕು. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಯಾವುದೇ ತೀರ್ಪು ನೀಡದಂತೆ ಸೂಚನೆ ನೀಡಿದೆ. ಜೊತೆಗೆ, ಆ.29ಕ್ಕೆ ಸಿಎಂ ಸಿದ್ದರಾಮಯ್ಯ ಅವರ ರಿಟ್ ಅರ್ಜಿ ವಿಚಾರಣೆ ಮುಂದೂಡಿಕೆ ಮಾಡಿದೆ.