ನವದೆಹಲಿ: ದೆಹಲಿ ಹೈಕೋರ್ಟ್‌ನ ಆನ್‌ಲೈನ್ ವಿಚಾರಣೆಯ ವೇಳೆ ಇಂದು (ಬುಧವಾರ) ಅತ್ಯಂತ ಮುಜುಗರದ ಮತ್ತು ಆಘಾತಕಾರಿ ಘಟನೆಯೊಂದು ಸಂಭವಿಸಿದೆ. ಅಪರಿಚಿತ ಹ್ಯಾಕರ್ ಒಬ್ಬರು ನ್ಯಾಯಾಲಯದ ವರ್ಚುವಲ್ ಸಭೆಗೆ ನುಗ್ಗಿ, ವಿಚಾರಣೆ ನಡೆಯುತ್ತಿದ್ದಾಗಲೇ ಮೂರು ಬಾರಿ ಅಶ್ಲೀಲ (Porn) ವಿಡಿಯೋಗಳನ್ನು ಪ್ರಸಾರ ಮಾಡುವ ಮೂಲಕ ಕಲಾಪಕ್ಕೆ ಅಡ್ಡಿಪಡಿಸಿದ್ದಾರೆ.
ಹ್ಯಾಕರ್ ‘ಶಿತ್‌ಜೀತ್ ಸಿಂಗ್’ ಎಂಬ ನಕಲಿ ಹೆಸರಿನಲ್ಲಿ ವಿಡಿಯೋ ಕಾನ್ಫರೆನ್ಸ್‌ಗೆ ಲಗ್ಗೆ ಇಟ್ಟಿದ್ದ ಎನ್ನಲಾಗಿದೆ. ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಅವರ ಪೀಠದಲ್ಲಿ ವಿಚಾರಣೆ ನಡೆಯುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಮೊದಲ ಬಾರಿ ಅಶ್ಲೀಲ ವಿಡಿಯೋ ಪ್ರಸಾರವಾದ ತಕ್ಷಣ ತಾಂತ್ರಿಕ ತಂಡ ಅದನ್ನು ಸ್ಥಗಿತಗೊಳಿಸಿತ್ತು. ಆದರೆ, ವಿಚಾರಣೆ ಪುನರಾರಂಭಗೊಂಡ ನಂತರ ಹ್ಯಾಕರ್ ಮತ್ತೆ ಎರಡು ಬಾರಿ ಅದೇ ಕೃತ್ಯ ಎಸಗಿದ್ದಾನೆ. ಈ ವೇಳೆ ಸಿಸ್ಟಮ್‌ನಲ್ಲಿ “You’ve been hacked” (ನಿಮ್ಮ ಸಿಸ್ಟಮ್ ಹ್ಯಾಕ್ ಆಗಿದೆ) ಎಂಬ ಸಂದೇಶ ಕೂಡ ಕಾಣಿಸಿಕೊಂಡಿದೆ.
ಕಲಾಪಕ್ಕೆ ಪದೇ ಪದೇ ಅಡ್ಡಿಯಾದ ಕಾರಣ ಮುಖ್ಯ ನ್ಯಾಯಮೂರ್ತಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಕೂಡಲೇ ವಿಚಾರಣೆಯನ್ನು ಮುಂದೂಡಿದರು. ಅಲ್ಲದೆ, ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶಿಸಿದ್ದಾರೆ.








