ಮಂಡ್ಯ : ಜಿಲ್ಲೆಯ ವಿವಿಧೆಡೆ ಗುರುವಾರ ಇಡೀ ರಾತ್ರಿ ಸುರಿದ ಕುಂಭದ್ರೋಣ ಮಳೆಯಿಂದಾಗಿ ಹಲವಾರು ಅವಾಂತರಗಳನ್ನು ಸೃಷ್ಟಿಸಿದೆ.
ಮದ್ದೂರು ತಾಲ್ಲೂಕಿನ ನಿಲುವಾಗಿಲು ಗ್ರಾಮದ ಕೆರೆ ಕೋಡಿ ಬಿದ್ದು ನಾಲೆಯಲ್ಲಿ ತ್ಯಾಜ್ಯ ತುಂಬಿದ ಪರಿಣಾಮ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ 15 ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ಪರಿಣಾಮ ಜನರು ರಾತ್ರಿಯಿಡೀ ಜಾಗರಣೆ ಮಾಡಿ ದವಸ ಧಾನ್ಯ ಸೇರಿದಂತೆ ಅಗತ್ಯ ವಸ್ತುಗಳನ್ನು ಸಂರಕ್ಷಿಸಿಕೊಂಡಿದ್ದಾರೆ.
ಇನ್ನು ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಮದ್ದೂರು ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ ಮನೆಗಳಿಗೆ ನೀರು ನುಗ್ಗಿರುವುದೆಕೆ ಎಂದು ಗ್ರಾಮಸ್ಥರ ಬಳಿ ಚರ್ಚಿಸಿದರು.
ನಾಲೆಗಳಲ್ಲಿರುವ ತ್ಯಾಜ್ಯವನ್ನು ಸ್ವಚ್ಚತೆ ಮಾಡದ ಪರಿಣಾಮ ಮನೆಗಳಿಗೆ ನೀರು ನುಗ್ಗಲು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿಯೇ ನೇರ ಕಾರಣರಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
ತಕ್ಷಣವೇ ಎಚ್ಚೆತ್ತುಕೊಂಡ ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ ಅವರು ನಿಲುವಾಗಿಲು ಗ್ರಾಮ ಪಂಚಾಯಿತಿ ಹಾಗೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿ ನಾಲೆಗಳಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯದ ರಾಶಿಯನ್ನು ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಲಾಯಿತು. ಇನ್ನು ಮುಂದೆ ಈ ರೀತಿ ತೊಂದರೆಯಾಗಬಾರದು. ನೀರು ನಾಲೆಗಳಲ್ಲಿ ಸರಾಗವಾಗಿ ಹರಿಯುವಂತೆ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.
ಮನೆಗಳಿಗೆ ನೀರು ನುಗ್ಗಿರುವ ನಿವಾಸಿಗಳಿಗೆ ನಿಲುವಾಗಿಲು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ತಾತ್ಕಾಲಿಕವಾಗಿ ಗಂಜಿ ಕೇಂದ್ರದ ವ್ಯವಸ್ಥೆ ಮಾಡಲಾಗಿದೆ ಎಂದರು.
ತಾಲೂಕಿನ ಹಲವೆಡೆ ಇನ್ನು ಎರಡು ಮೂರು ದಿನಗಳ ಕಾಲ ಮಳೆಯ ಪ್ರಮಾಣ ಹೆಚ್ಚಾಗುವ ಸಂಭವವಿದೆ ಹೀಗಾಗಿ ಜನರು ಶಿಥಿಲಗೊಂಡಿರುವ ಮನೆಗಳಲ್ಲಿ ವಾಸಿಸದ ಸುರಕ್ಷಿತ ಸ್ಥಳಗಳಲ್ಲಿರುವಂತೆ ಮನವಿ ಮಾಡಿದರು. ಗುರುವಾರ ಬಿದ್ದಿರುವ ಮಳೆಯಿಂದ ತಾಲೂಕಿನ ಕೆಲವೆಡೆ ಮನೆ, ಬೆಳೆಗಳು ಜಲಾವೃತಗೊಂಡು ಸಾಕಷ್ಟು ನಷ್ಟ ಉಂಟಾಗಿದೆ. ಈಗಾಗಲೇ ಗ್ರಾಮ ಆಡಳಿತಾಧಿಕಾರಿಗಳು ಸಮೀಕ್ಷೆ ಕೂಡ ನಡೆಸುತ್ತಿದ್ದು , ಎನ್.ಡಿ.ಆರ್.ಎಫ್ ಹಾಗೂ ಎಸ್.ಡಿ.ಆರ್.ಎಫ್ ನಿಧಿಯ ಅನ್ವಯ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಭಾರಿ ಮಳೆಯಿಂದಾಗಿ ಕೆಸ್ತೂರು ಪೋಲೀಸ್ ಠಾಣೆಗೆ ಜಲ ದಿಗ್ಬಂಧನ
ಪ್ರತಿ ಮಳೆಗಾಲದಲ್ಲೂ ಕೆಸ್ತೂರು ಪೋಲೀಸ್ ಠಾಣೆ ಜಲಾವೃತವಾಗುತ್ತಿದೆ. ಮದ್ದೂರು – ತುಮಕೂರು ರಾಜ್ಯ ಹೆದ್ದಾರಿಯ ನೀರು ಹಾಗೂ ಗ್ರಾಮದ ಚರಂಡಿ ನೀರೆಲ್ಲ ಪೋಲೀಸ್ ಠಾಣೆಯ ರಸ್ತೆಯ ಚರಂಡಿಗೆ ಬಿಡುವ ಪರಿಣಾಮ ಮಳೆ ನೀರು ಪೋಲೀಸ್ ಠಾಣೆಯನ್ನು ಜಲಾವೃತವಾಗಿದ್ದು, ಹೀಗಾಗಿ ಶಾಶ್ವತ ಪರಿಹಾರ ಒದಗಿಸುವಂತೆ ಸಿಬ್ಬಂದಿಗಳು ಮನವಿ ಮಾಡಿದ್ದಾರೆ.
ಇನ್ನು ಒಂದೇ ದಿನ ಸುರಿದ ಕುಂಭ ದ್ರೋಣ ಮಳೆಗೆ ತಾಲೂಕಿನ ಜೀವನಾಡಿ ಶಿಂಷಾ ನದಿ ಉಕ್ಕಿ ಹರಿಯುತ್ತಿದ್ದು, ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹೀಗಾಗಿ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ತಿಳಿಸಿದ್ದಾರೆ.
ವರದಿ : ಗಿರೀಶ್ ರಾಜ್, ಮಂಡ್ಯ
ಮಂಡ್ಯ: ಅ.13ರಂದು ಮದ್ದೂರಿನಲ್ಲಿ ಬೃಹತ್ ಉದ್ಯೋಗ ಮೇಳ – ಎಸ್.ಎಂ.ಗಂಗಾಧರ್
‘RBD ಮೋಟಾರ್ಸ್’ನ ನೂತನ ‘ರಾಯಲ್ ಎನ್ ಫೀಲ್ಡ್ ಶೋ ರೂಂ’ ಉದ್ಘಾಟಿಸಿದ ‘ಶಾಸಕ ಗೋಪಾಲಕೃಷ್ಣ ಬೇಳೂರು’