ಬೆಂಗಳೂರು : ಕರಸೇವಕ ಶ್ರೀಕಾಂತ್ ಪೂಜಾರಿ ಬಂದಿಸಿದ ಪೊಲೀಸ್ ಅಧಿಕಾರಿ ಯಾವುದೇ ರೀತಿಯಾದಂತಹ ಕಾನೂನನ್ನು ಉಲ್ಲಂಘಿಸಿಲ್ಲ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದರು.
ಇಂದು ನಗರದಲ್ಲಿ ಸುಧಿಕಾರದೊಂದಿಗೆ ಮಾತನಾಡಿದ ಅವರು, ಕರಸೇವಕ ಶ್ರೀಕಾಂತ್ ಪೂಜಾರಿಯನ್ನು ಬಂಧನಕ್ಕೊಳಪಡಿಸಿದ ಇನ್ಸ್ ಪೆಕ್ಟರ್ ಯಾವುದೇ ಕಾನೂನನ್ನು ಉಲ್ಲಂಘಿಸಿಲ್ಲ .16 ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಆ ಬಗ್ಗೆ ದಾಖಲೆ ಇದೆ. ಆ ಪೈಕಿ ಕೆಲ ಪ್ರಕರಣಗಳಲ್ಲಿ ಖುಲಾಸೆಯಾಗಿದ್ದಾನೆ. ಅಂತಹ ವ್ಯಕ್ತಿಗಾಗಿ ಬಿಜೆಪಿ ಹೋರಾಟ ಮಾಡುತ್ತಿದೆ. ಅವನೊಬ್ಬನೇ ಹಿಂದೂನಾ? ಬೇರೆ ಹಿಂದೂಗಳೂ ಇದ್ದಾರೆ. ಅವರು ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಿಜೆಪಿಯನ್ನು ತಿರಸ್ಕರಿಸಿ ನಮ್ಮ ಕಾಂಗ್ರೆಸ್ ಸರ್ಕಾರವನ್ನು ಆಯ್ಕೆ ಮಾಡಿರುವ ಜನರಲ್ಲಿ ಹೆಚ್ಚಿನ ಅಂಶ ಹಿಂದೂಗಳೇ ಇದ್ದಾರೆ. ನಾವು ಹೇಗೆ ಹಿಂದೂ ವಿರೋಧಿ ಆಗುತ್ತೇವೆ? ಸುಮ್ಮನೇ ಬಿಜೆಪಿ ನಾಯಕರು ಬಾಯಿಗೆ ಬಂದಂಗೆ ಮಾತನಾಡುತ್ತಾರೆ ಎಂದು ತಿರುಗೇಟು ನೀಡಿದರು.
ಶ್ರೀಕಾಂತ್ ಬಂಧಿಸಿದ ಪೊಲೀಸ್ ನನ್ನು ಅಮಾನತುಗೊಳಿಸಬೇಕೆಂಬ ಬಿಜೆಪಿ ಆಗ್ರಹ ಕುರಿತ ಪ್ರಶ್ನೆಗೆ ಉತ್ತರಿಸಿ, ಯಾವ ಕಾರಣಕ್ಕೆ ಮಾಡಬೇಕು? ಇನ್ಸ್ ಪೆಕ್ಟರ್ ಕಾನೂನಿಗೆ ವಿರುದ್ಧವಾಗಿ ಏನನ್ನೂ ಮಾಡಿಲ್ಲ. ಅವರ ಕರ್ತವ್ಯವನ್ನು ಮಾತ್ರ ನಿಭಾಯಿಸಿದ್ದಾರೆ. ಶ್ರೀಕಾಂತ್ ಬಂಧನ ಕಾನೂನಿಗೆ ವಿರುದ್ಧವಲ್ಲವಾದ್ದರಿಂದ ಈ ವಿಚಾರವನ್ನು ರಾಜಕೀಯಗೊಳಿಸಬಾರದು ಏನೇ ಆರೋಪ ಮಾಡುವುದಕ್ಕೂ ಒಂದು ಮಿತಿ ಇರಬೇಕು. ಇಂತಹ ವಿಷಯಗಳಲ್ಲಿ ನಾವು ನ್ಯಾಯವಾಗಿ ಹೋಗಲು ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದರು.