ಮಂಡ್ಯ : ಮದ್ದೂರು ಪಟ್ಟಣದಲ್ಲಿ ಇತ್ತಿಚೆಗೆ ನಡೆದ ಗಲಭೆ ಖಂಡಿಸಿ ಸೌಹಾರ್ದ ಸಾಮರಸ್ಯ ನಡಿಗೆ ನಡೆಸಲು ಮುಂದಾಗಿದ್ದ ವಿವಿಧ ಸಂಘಟನೆಗಳ ಜಾಥಾ ಕಾರ್ಯಕ್ರಮಕ್ಕೆ ಪೋಲೀಸರು ನಿರಾಕರಿಸಿದ ಹಿನ್ನೆಲೆಯಲ್ಲಿ ಜನಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ ಘಟನೆ ಸೋಮವಾರ ಜರುಗಿತು.
ಮಳವಳ್ಳಿ ರಸ್ತೆಯಲ್ಲಿರುವ ಪ್ರೊ.ನಂಜುಂಡಸ್ವಾಮಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರ ಮೂಲಕ ಸಾಮರಸ್ಯ ನಡಿಗೆಗೆ ಚಾಲನೆ ನೀಡಲಾಯಿತು. ಶಿವಪುರದ ಧ್ವಜ ಸತ್ಯಾಗ್ರಹ ಸೌಧದವರೆಗೆ ಕಾಲ್ನಡಿಗೆ ಜಾಥಾ ಮಾಡಲು ಪೊಲೀಸ್ ಇಲಾಖೆ ನಿರಾಕರಣೆ ಮಾಡಿದ ಹಿನ್ನೆಲೆಯಲ್ಲಿ ಪ್ರತಿಮೆಯ ಬಳಿಯೇ ಸೌಹಾರ್ದ ಸಾಮರಸ್ಯದ ಸಭೆ ನಡೆಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ, ಪುರಸಭಾ ಮಾಜಿ ಅಧ್ಯಕ್ಷ ಎಂ.ಸಿ.ಬಸವರಾಜು, ಜಿಲ್ಲೆಯು ಶಾಂತಿ, ಸಾಮರಸ್ಯ ಹಾಗೂ ಸಹಬಾಳ್ವೆಗೆ ಹೆಸರಾಗಿದೆ. ಇಂತಹ ಜಿಲ್ಲೆಯಲ್ಲಿ ಕೆಲವರು ಕೋಮು ಗಲಭೆ ಉಂಟು ಮಾಡುವ ಮೂಲಕ ಮುಂದೆ ಅಧಿಕಾರ ಹಿಡಿಯಲು ಹುನ್ನಾರ ನಡೆಸಿದ್ದಾರೆ. ಆ ಪಿತೂರಿ ವಿರುದ್ಧ ವಿವಿಧ ಜನಪರ ಸಂಘಟನೆಗಳ ನಾವೆಲ್ಲರೂ ಸೌಹಾರ್ದ ಸಾಮರಸ್ಯ ನಡಿಗೆಯನ್ನು ಸೋಮವಾರ ನಡೆಸುವ ಮೂಲಕ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ನೆಲಸಬೇಕು ಎಂಬ ಸಂದೇಶ ನೀಡುತ್ತಿದ್ದೇವೆ ಎಂದರು.
ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ ಮಾತನಾಡಿ, ರೈತ ಸಂಘಟನೆಗಳು ಸೇರಿದಂತೆ ಸಮಾಜದಲ್ಲಿ ಶಾಂತಿ ಸೌಹಾರ್ದತೆ ಬಯಸುವ ಎಲ್ಲಾ ಸಂಘಟನೆಗಳು ಸಾಮರಸ್ಯ ನಡಿಗೆಯಲ್ಲಿ ಪಾಲ್ಗೊಂಡಿವೆ ಹಾಗೂ ನಾವೆಲ್ಲ ಬಸವಣ್ಣ ಹಾಗೂ ಗಾಂಧೀಜಿಯವರ ತತ್ವಗಳನ್ನು ಅನುಸರಿಸುತ್ತಿದ್ದೇವೆ. ಈ ಸಾಮರಸ್ಯ ನಡಿಗೆಯು ಶಿವಪುರದವರೆಗೆ ನಡೆಸಲು ಪೊಲೀಸ್ ಇಲಾಖೆ ಅನುಮತಿ ನೀಡಬೇಕಿತ್ತು ಆದರೆ, ಕೋಮು ಪ್ರಚೋದನೆ ಮಾಡುವ ಬಿಜೆಪಿಯ ಸಿ.ಟಿ.ರವಿ, ಬಸವನಗೌಡ ಪಾಟೀಲ್ ಯತ್ನಾಳ್, ಪ್ರತಾಪ್ ಸಿಂಹ ಅಂತವರನ್ನು ಮದ್ದೂರಿಗೆ ಬಂದು ಕೋಮು ದ್ವೇಷದ ಬಗ್ಗೆ ಮಾತನಾಡಲು ಅನುಮತಿ ನೀಡಿ. ಈಗ ನಮ್ಮಂತಹ ಶಾಂತಿ ಪ್ರಿಯರಿಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯು ಅನುಮತಿ ನೀಡದಿರುವುದು ಬೇಸರ ತಂದಿದೆ ಎಂದರು.
ಸಿಪಿಐಎಂನ ಕೃಷ್ಣೇಗೌಡ ಮಾತನಾಡಿ, ಮದ್ದೂರಿನಲ್ಲಿ ಇತ್ತೀಚೆಗೆ ಗಣೇಶ ಮೆರವಣಿಗೆ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದಿದ್ದ ಬಳಿಕ ಆದ ಗಲಾಭೆಯನ್ನು ಪೊಲೀಸರು ತಹಬದಿಗೆ ತಂದಿದ್ದಾರೆ. ಅದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಸಾಮರಸ್ಯ ನಡಿಗೆ ನಡೆಸಲು ಅನುಮತಿ ನೀಡದಿರುವುದು ಸರಿಯಲ್ಲವೆಂದು ಸರ್ಕಾರ, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯನ್ನು ಟೀಕಿಸಿದರು.
ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ರಾಜಶೇಖರ್ ಮೂರ್ತಿ ಮಾತನಾಡಿ, ನಮ್ಮ ದೇಶ ಜಾತ್ಯತೀತ ದೇಶ ಎಲ್ಲಾ ಧರ್ಮಿಯರು ಒಂದಾಗಿ ಬದುಕು ಕಟ್ಟಿಕೊಂಡಿದ್ದೇವೆ. ಭಾರತ ದೇಶ ಪ್ರಪಂಚದಲ್ಲೇ ಹೆಸರು ಮಾಡಲಿಕ್ಕೆ ಎಲ್ಲಾ ಧರ್ಮಿಯರು ಒಟ್ಟಾಗಿರುವುದೇ ಪ್ರಮುಖ ಕಾರಣ ಎಂದರು.
ಶ್ರೀರಂಗಪಟ್ಟಣ ಕೋಮು ಸೌಹಾರ್ದ ವೇದಿಕೆ ಇಲಿಯಾಸ್ ಅಹಮದ್ ಮಾತನಾಡಿ, ಸರ್ಕಾರ ಮುಸ್ಲಿಂ ಸಂಘಟನೆಗಳು ಸೌಹಾರ್ದ ನಡಿಗೆಯಲ್ಲಿ ಭಾಗವಹಿಸಬಾರದು ಎಂದು ಎಷ್ಟೇ ಅಡೆತಡೆಗಳನ್ನು ಒಡ್ಡಿದರು ಕೂಡ ನಾವು ಇಂದು ಭಾಗವಹಿಸಿ ಸೌಹಾರ್ದ ನಡಿಗೆಗೆ ಬೆಂಬಲ ಸೂಚಿಸಿದ್ದೇವೆ. ನಾವು ಶಾಂತಿ ಪ್ರಿಯರು ಈ ದೇಶದಲ್ಲಿ ಶಾಂತಿ ನೆಲೆಸಬೇಕೆಂದು ಸಂದೇಶ ಸಾರುತ್ತಿದ್ದೇವೆ ಎಂದರು.
ಸಿಐಟಿಯು ಸಿ.ಕುಮಾರಿ ಮಾತನಾಡಿ, ದೇಶದ ಇತಿಹಾಸ ಮರೆತಿರುವವರು ಇತಿಹಾಸ ಸೃಷ್ಟಿ ಮಾಡಲಿಕ್ಕೆ ಸಾಧ್ಯವಿಲ್ಲ. ನಮ್ಮ ಭಾರತ ದೇಶ ಸರ್ವಧರ್ಮಗಳು ಒಗ್ಗಟಿನಿಂದ ಬದುಕುತ್ತಿದ್ದೇವೆ ಕೆಲವು ಕಿಡಿಗೇಡಿಗಳು ರಾಜಕೀಯ ಲಾಭಕ್ಕಾಗಿ ಯುವಜನರಲ್ಲಿ ವಿಷಬೀಜ ಬಿತ್ತಿ ಜಿಲ್ಲೆಯ ಕೋಮು ಸೌಹಾರ್ದತೆ ಹಾಳು ಮಾಡಲು ಹೊರಟಿದ್ದಾರೆ ಇದಕ್ಕೆ ಅವಕಾಶ ಕೊಡುವುದಿಲ್ಲ ಎಂದರು.
ಜನವಾದಿ ಮಹಿಳಾ ಸಂಘಟನೆ ದೇವಿ ಮಾತನಾಡಿ, ಜಿಲ್ಲೆಯಲ್ಲಿ ಬಿಜೆಪಿಯವರು ಅಧಿಕಾರ ದಾಹಕ್ಕೆ ಯಾರನ್ನು ಬೇಕಾದರೂ ಬಲಿ ಕೊಡಲು ಸಿದ್ದರಿದ್ದಾರೆ. ಸತ್ತ ಹೆಣದ ಮುಂದೆ ರಾಜಕೀಯ ಮಾಡಿ ಸಂವಿಧಾನವನ್ನೇ ತಿರುಚಲು ಹೊರಟಿದ್ದಾರೆ. ಜಿಲ್ಲೆಯಲ್ಲಿ ಕೋಮು ಸಂಘರ್ಷ ಹಾಳು ಮಾಡಲಿಕ್ಕೆ ಅವಕಾಶ ಕೊಡುವುದಿಲ್ಲ ಮದ್ದೂರಿನ ನೆಲದಲ್ಲಿ ಮುಂದಿನ ದಿನಗಳಲ್ಲಿ ಕೊಮುವಾದಿಗಳಿಗೆ ಜಾಗವಿಲ್ಲ ಎಂದು ಸಾರಿ ಹೇಳಬೇಕಾಗಿದೆ ಹಿಂದೂ ಮುಸ್ಲಿಂ ಐಕ್ಯತೆ ಚಿರಾಯುವಾಗಲಿ ಎಂದರು.
ಇನ್ನು ಸೌಹಾರ್ದ ಸಾಮರಸ್ಯ ನಡಿಗೆ ಹಿನ್ನೆಲೆಯಲ್ಲಿ ಮದ್ದೂರು ಪಟ್ಟಣದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ತಿಮ್ಮಯ್ಯ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸೌಹಾರ್ದ ಸಾಮರಸ್ಯ ನಡಿಗೆಗೆ ಅವಕಾಶ ನೀಡದ ಪೊಲೀಸರ ವಿರುದ್ದ ಜನಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಚಿಂತಕರಾದ ಭೂಮಿಗೌಡ, ಪ್ರೊ.ಹುಲ್ಕೆರೆ ಮಹದೇವ, ಪ್ರೊ.ಚಂದ್ರಶೇಖರನ್, ಎಂ.ಸಿ.ಬಸವರಾಜು, ಮಳವಳ್ಳಿ ಕೃಷ್ಣ, ಲೇಖಕ ರಾಜೇಂದ್ರ ಪ್ರಸಾದ್, ಬೋರಾಪುರ ಶಂಕರೇಗೌಡ, ಉಮೇಶ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ, ತಿಮ್ಮೇಗೌಡ, ಹನುಮೇಶ್, ಜಿ.ರಾಮಕೃಷ್ಣ, ಟಿ.ಯಶ್ವಂತ್, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಜಿಲ್ಲಾಧ್ಯಕ್ಷ ದೊಡ್ಡರಸಿನಕೆರೆ ಶಿವಲಿಂಗಯ್ಯ, ತಾಲೂಕು ಅಧ್ಯಕ್ಷ ಡಿ.ಸಿ.ಮಹೇಂದ್ರ, ಜನಶಕ್ತಿ ಸಂಘಟನೆಯ ಸಿದ್ದರಾಜು, ನಗರಕೆರೆ ಜಗದೀಶ್, ಬಿ.ಕೃಷ್ಣಪ್ರಕಾಶ್, ದಸಂಸ ಅಂದಾನಿ ಸೋಮನಹಳ್ಳಿ, ಶಿವರಾಜು ಮರಳಿಗ, ಎಂ.ವಿ.ಕೃಷ್ಣ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
ಜಿಯೋ ಮಾರ್ಟ್‌ನ ಜಿಯೋ ಉತ್ಸವ-2025 ಆರಂಭ: ಭರ್ಜರಿ ಕೊಡುಗೆ ಘೋಷಣೆ | Jio Mart’s Jio Festival-2025
Watch Video : ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಹೊಸ ‘AI’ ಅಸ್ತ್ರ ; ಮತ್ತೊಂದು ವಿಡಿಯೋ ಬಿಡುಗಡೆ