ಕಾರವಾರ : ಮೃತರ ಹೆಸರಿನಲ್ಲಿರುವ ಆಸ್ತಿಯಲ್ಲಿ ವಾರಸುದಾರರ ಹೆಸರು ಸೇರಿಸಲು ರಾಜ್ಯದಲ್ಲಿ ಪೌತಿ ಖಾತೆ ಅಭಿಯಾನ ಕೈಗೊಂಡಿದ್ದು, ವಾರಸುದಾರರ ಹೆಸರಿಗೆ ಜಮೀನು ನೋಂದಣಿ ಮಾಡಿಕೊಡಲಾಗುತ್ತಿದ್ದು, ಪೌತಿ ಖಾತೆ ಅಭಿಯಾನ ಮುಗಿದ ತಕ್ಷಣ ಪೋಡಿ ಮುಕ್ತ ಗ್ರಾಮ ಅಭಿಯಾನ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಪೌತಿ ಖಾತೆ ಅಭಿಯಾನ ಮುಗಿದ ತಕ್ಷಣ ಪೋಡಿ ಮುಕ್ತ ಗ್ರಾಮ ಅಭಿಯಾನ ಕೈಗೊಳ್ಳಲಾಗುವುದು, ಆನ್ಲೈನ್ ಮೂಲಕ ಅಂಗೈಯಲ್ಲಿ ಆಸ್ತಿ ದಾಖಲೆ ನೀಡಲು ಭೂ ಸುರಕ್ಷಾ ಯೋಜನೆ ರೂಪಿಸಲಾಗಿದೆ. ರಾಜ್ಯದಲ್ಲಿ 150 ವರ್ಷಗಳಷ್ಟು ಹಳೆಯ ದಾಖಲೆಗಳಿದ್ದು, ಅವು ಕಳೆದು ಹೋಗಬಾರದು, ಹೆಸರು ತಿದ್ದುಪಡಿ ಮಾಡಬಾರದು ಎಂಬ ಕಾರಣಕ್ಕೆ ಸ್ಕ್ಯಾನಿಂಗ್ ಮಾಡಲಾಗುತ್ತಿದೆ. ಶೇ. 33 ರಷ್ಟು ಸ್ಕ್ಯಾನಿಂಗ್ ಆಗಿದ್ದು, ಇದು ಪೂರ್ಣಗೊಂಡ ನಂತರ ಜನ ಮನೆಯಲ್ಲಿ ಕುಳಿತು ಅರ್ಜಿ ಹಾಕಿ ಆಸ್ತಿ ದಾಖಲೆ ಪಡೆಯಬಹುದು ಎಂದು ಹೇಳಿದ್ದಾರೆ.
ರಾಜ್ಯದಲ್ಲಿ 11.80 ಲಕ್ಷಕ್ಕೂ ಅಧಿಕ ಜನರು ವಿವಿಧ ಯೋಜನೆಗಳಡಿ ಅನಧಿಕೃತವಾಗಿ ಮಾಸಾಶನ ಪಡೆಯುತ್ತಿರುವ ಅನುಮಾನವಿದ್ದು, ಈ ಬಗ್ಗೆ ಪರಿಶೀಲನೆಗೆ ಶೀಘ್ರವೇ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು 60 ವಯಸ್ಸಿಗಿಂತ ಕಡಿಮೆ ಇರುವ ಲಕ್ಷಾಂತರ ಜನ ವೃದ್ಧಾಪ್ಯ ವೇತನ ಪಡೆಯುತ್ತಿರುವ ಮಾಹಿತಿ ಆಧಾರ್ ಸೀಡಿಂಗ್ನಿಂದ ಕಂಡುಬಂದಿದೆ ಎಂದು ಹೇಳಿದ್ದಾರೆ.
ಸರ್ಕಾರಿ ನೌಕರರ ಎಚ್ಆರ್ಎಂಎಸ್ನಲ್ಲಿ ನೋಂದಣಿಯಾಗಿರುವ 117 ಜನ, ಆದಾಯ ತೆರಿಗೆ ಪಾವತಿ ಮಾಡುವ 13,702 ಜನ, ಎಪಿಎಂಎಲ್ ಕಾರ್ಡ್ ಹೊಂದಿರುವವರು ವಿವಿಧ ಪಿಂಚಣಿ ಸೌಲಭ್ಯ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ಅಂಗವೈಕಲ್ಯ ಇಲ್ಲದವರೂ ವೈದ್ಯರ ನಕಲಿ ಪ್ರಮಾಣಪತ್ರ ಪಡೆದು ಪಿಂಚಣಿ ಪಡೆಯುತ್ತಿರುವುದನ್ನು ಗ್ರಾಮ ಆಡಳಿತ ಅಧಿಕಾರಿಗಳು ಗಮನಕ್ಕೆ ತಂದಿದ್ದಾರೆ. ಹಾಗಾಗಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಿದ್ದೇವೆ ಎಂದು ತಿಳಿಸಿದ್ದಾರೆ.