ಬೆಂಗಳೂರು : ಶೈಕ್ಷಣಿಕ ಪ್ರವಾಸದ ವೇಳೆ ವಿದ್ಯಾರ್ಥಿಯೊಂದಿಗೆ ಅಸಹಜ ರೀತಿ ಫೋಟೋ ಹಾಗೂ ವಿಡಿಯೋ ತೆಗೆಸಿಕೊಂಡ ಮುಖ್ಯ ಶಿಕ್ಷಕಿಯ ನಡೆಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು, ಅವರನ್ನು ಶಿಕ್ಷಕಿ ಹಾಗೂ ವಿದ್ಯಾರ್ಥಿ ಎನ್ನಬಹುದೇ ಎಂದು ಕಿಡಿ ಕಾರಿದೆ
ಪ್ರಕರಣ ಸಂಬಂಧ ಚಿಕ್ಕಬಳ್ಳಾಪುರ ಜಿಲ್ಲಾ ಪೋಕ್ಸೋ ವಿಶೇಷ ನ್ಯಾಯಾಲಯದ ವಿಚಾರಣೆ ಮತ್ತು ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಮುಖ್ಯ ಶಿಕ್ಷಕಿ ಪುಷ್ಪಲತಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಶೈಕ್ಷಣಿಕ ಪ್ರವಾಸದ ವೇಳೆ ಶಿಕ್ಷಕಿ ವಿದ್ಯಾರ್ಥಿಯೊಬ್ಬನ ಜತೆ ಕೆಲ ಪೋಟೋ ತೆಗೆದುಕೊಂಡ ಕಾರಣ ಅವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.ಪೋಟೋಗಳು ಅಸಹಜವಾಗಿಯೇ ಇವೆ. ಆದರೆ, ಶಿಕ್ಷಕಿ ಮತ್ತು ವಿದ್ಯಾರ್ಥಿ ನಡುವೆ ತಾಯಿ-ಮಗನ ಸಂಬಂಧವಿದೆ ಎಂದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಪ್ರಕರಣದ ದಾಖಲೆಗಳನ್ನು ಓದಿದ್ದೇನೆ. ಶಿಕ್ಷಕಿ ಏಕೆ ಹಾಗೆ ಮಾಡಿದ್ದಾರೆ? ಶಿಕ್ಷಕಿ ವಿದ್ಯಾರ್ಥಿಯೊಂದಿಗೆ ಡ್ಯೂಯೆಟ್ ಹಾಡುತ್ತಿದ್ದರೆ, ಇದು ಶಿಕ್ಷಕಿ ಮಾಡುವ ಕೆಲಸವೇ? ವಿದ್ಯಾರ್ಥಿಗೆ ಅರ್ಜಿದಾರರು ಕೇರ್ ಟೇಕಿಂಗ್ ಶಿಕ್ಷಕಿಯಾಗಿದ್ದಾರೆ ಎಂದು ಅರ್ಜಿದಾರರ ಪರ ವಕೀಲರು ಸಮಜಾಯಿಷಿ ನೀಡಿದಾಗ ಇದಕ್ಕೆ ನ್ಯಾಯಮೂರ್ತಿಗಳು ಅವು ಕೇರ್ ಟೇಕಿಂಗ್ ಚಿತ್ರಗಳೇ? ಎಂದು ಖಾರವಾಗಿ ಪ್ರಶ್ನಿಸಿದರು.
ಪೋಟೋಗಳನ್ನು ನೋಡಿ, ಮತ್ತೆ ತಾಯಿ ಮತ್ತು ಮಗನ ಸಂಬಂಧ ಎಂದು ಹೇಳಬೇಡಿ. ವಿದ್ಯಾರ್ಥಿಯೊಂದಿಗೆ ಸೆಲ್ಫಿ-ವಿಡಿಯೋ ಅರ್ಜಿದಾರೆಗೆ ಏಕೆ ಬೇಕಿತ್ತು? ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದೇನಿತ್ತು? ಪೋನ್ನಲ್ಲಿ ಯಾಕೆ ವಿಡಿಯೋ-ಫೋಟೋಗಳನ್ನು ಇಟ್ಟುಕೊಂಡಿದ್ದರು ಎಂದು ಪ್ರಶ್ನೆಗಳ ಸುರಿಮಳೆಗೈದರು.
ಅರ್ಜಿದಾರರ ಪರ ವಕೀಲರು, ಶಿಕ್ಷಕಿ ಅಪ್ಲೋಡ್ ಮಾಡಿಲ್ಲ. ಕೆಲ ಸಾಕ್ಷಿಗಳು ಅಪ್ಲೋಡ್ ಮಾಡಿದ್ದಾರೆ. ಅರ್ಜಿದಾರರ ನಡೆ ವಿಪರೀತವಾಗಿದೆ ಎನ್ನುವುದು ಒಪ್ಪುತ್ತೇನೆ. ಆದರೆ, ನಿಜವಾಗಿಯೂ ಅವರ ಮಧ್ಯೆ ಲೈಂಗಿಕ ಉದ್ದೇಶವಿರಲಿಲ್ಲ. ಶೈಕ್ಷಣಿಕ ಪ್ರವಾಸಕ್ಕೆ ಹೋದಾಗ ವಿಪರೀತ ಉತ್ಸಾಹದಿಂದ ಘಟನೆ ನಡೆದಿದೆ ಎಂದರು.
ಅದರಿಂದ ಮತ್ತೆ ಬೇಸರಗೊಂಡ ನ್ಯಾಯಮೂರ್ತಿಗಳು, ಏನದು ವಿದ್ಯಾರ್ಥಿ ಜೊತೆಗೆ ವಿಪರೀತ ಉತ್ಸಾಹ? ಅವರನ್ನು ಶಿಕ್ಷಕಿ ಹಾಗೂ ವಿದ್ಯಾರ್ಥಿ ಎಂದು ಕರೆಯಲಾಗುತ್ತದೆಯೇ? ಶಿಕ್ಷಕಿಯಾದವರು ಮಾಡಲೇಬಾರದ ಕೆಲಸವಿದು. ಆರೋಪಗಳನ್ನು ಕೈಬಿಡಲು ವಿಚಾರಣಾ ನ್ಯಾಯಾಲಯಕ್ಕೇ ಅರ್ಜಿ ಸಲ್ಲಿಸಿ ಎಂದು ಸೂಚಿಸಿ ಆಗಸ್ಟ್ 2ಕ್ಕೆ ವಿಚಾರಣೆ ಮುಂದೂಡಿದರು.