ಬೆಂಗಳೂರು : ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಕರಣ ರದ್ದು ಕೋರಿ ಬಿಎಸ್ ಯಡಿಯೂರಪ್ಪ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ಇಂದು ಹೈಕೋರ್ಟ್ ಏಕ ಸದಸ್ಯ ಪೀಠದಲ್ಲಿ ನಡೆಯಿತು. ವಿಚಾರಣೆ ಬಳಿಕ ಹೈಕೋರ್ಟ್ ನ್ಯಾಯಮೂರ್ತಿಗಳು, ವಿಚಾರಣೆಯನ್ನು ನಾಳೆ ಸಂಜೆ 5 ಗಂಟೆಗೆ ಮುಂದೂಡಿ ಆದೇಶ ಹೊರಡಿಸಿದರು.
ವಿಚಾರಣೆ ಆರಂಭದಲ್ಲಿ ಬಿಎಸ್ ಯಡಿಯೂರಪ್ಪ ಪರ ಹಿರಿಯ ವಕೀಲ ಸಿವಿ ನಾಗೇಶ್ ಅವರು ವಾದ ಆರಂಭಿಸಿದರು. ಸಂತ್ರಸ್ತ ಬಾಲಕಿಯ ದೂರುದಾರ ತಾಯಿಯ ನಡವಳಿಕೆಯನ್ನು ಗಮನಿಸಬೇಕು. ಅಧಿಕಾರಿಗಳು, ಸಂಬಂಧಿಗಳು, ರಾಜಕಾರಣಿಗಳ ಮೇಲೆ ಮಹಿಳೆ 56 ದೂರನ್ನು ನೀಡಿದ್ದಾರೆ. ಘಟನೆ ನಡೆದ ಒಂದುವರೆ ತಿಂಗಳ ನಂತರ ಮಾರ್ಚ್ 14ಕ್ಕೆ ಕೇಸ್ ದಾಖಲಾಗಿದೆ ಎಂದು ವಾದಿಸಿದರು.
ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂದು ಬಾಲಕಿಯ ಹೇಳಿಕೆ ಇದೆ. ಹಲವು ಜನರ ಸಮ್ಮುಖದಲ್ಲಿ ಈ ಘಟನೆ ನಡೆಯಲು ಸಾಧ್ಯವೇ? ಬಾಲಕಿಯ ಹೇಳಿಕೆಯನ್ನು ಆಧರಿಸಿ ಚಾರ್ಜ್ ಶೀಟ್ ದಾಖಲಿಸಲಾಗಿದೆ. ಎಂದು ಬಿಎಸ್ ಯಡಿಯೂರಪ್ಪ ಪರ ಹಿರಿಯ ವಕೀಲ ಸಿವಿ ನಾಗೇಶ್ ವಾದ ಮಂಡಿಸಿದರು. ಮಧ್ಯಂತರ ಆದೇಶ ತೆರವು ಕೋರಿ ಪ್ರಾಸಿಕ್ಯೂಷನ್ ಮನವಿ ಸಲ್ಲಿಸಿದ್ದಾರೆ. ಈ ಕುರಿತಂತೆ ಇಂದು ಹೈಕೋರ್ಟ್ ಏಕ ಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಿತು.
ಸಾಹೇಬರಿಗೆ 82 ವರ್ಷ ವಯಸ್ಸಾಗಿದ್ದು ಅವರಿಗೆ ಕೈ ನಡುಗುತ್ತವೆ. ಲೈಟ್ ಸ್ವಿಚ್ ಹಾಕಲು ನಮಗೆ ಹೇಳುತ್ತಾರೆ ಎಂದು ಕೆಲಸದವರ ಹೇಳಿಕೆ ಇದೆ. ಮಹಿಳೆ ಹಾಗೂ ಮಗಳು ರೂಮಿಗೆ ಹೋಗಿರಲಿಲ್ಲವೆಂದು ಸಾಕ್ಷಿಯ ಹೇಳಿಕೆ ಇದೆ. ಅಂಗರಕ್ಷಕರು ಬಿಎಸ್ ಯಡಿಯೂರಪ್ಪ ಅವರ ಸುತ್ತಮುತ್ತಲೆ ಇರುತ್ತಾರೆ. ಶಿವಾನಂದ ತಗಡೂರು ಎಂಬವರು ಆಹ್ವಾನ ಪತ್ರಿಕೆ ಕೊಡಲು ಬಂದಿದ್ದರು.
ಆ ಸಮಯದಲ್ಲಿ ಪರಮಶಿವಯ್ಯ ಎಂಬುವವರು ಕೂಡ ಬಂದಿದ್ದರು. ಅಲ್ಲಿದ್ದ ಎಲ್ಲ ಸಾಕ್ಷಿಗಳು ಇಂತಹ ಘಟನೆ ನಡೆದಿಲ್ಲವೆಂದು ಹೇಳಿದ್ದಾರೆ. ಬಿ ಎಸ್ ಯಡಿಯೂರಪ್ಪ ಅವರು ಹಾಲ್ ಬಿಟ್ಟು ಎಲ್ಲೂ ಹೋಗಿರ್ಲಿಲ್ಲವೆಂದು ಕೂಡ ಹೇಳಿದ್ದಾರೆ. ಆದರೂ ತನಿಖಾಧಿಕಾರಿ ಕೋರ್ಟಿಗೆ ಚಾರ್ಜ್ ಶೀಟ್ ದಾಖಲಿಸಿದ್ದಾರೆ. ಕೇವಲ ಬಾಲೆಗೆ ಹೇಳಿಕೆ ಆಧರಿಸಿ ಆರೋಪ ಪಟ್ಟಿ ದಾಖಲಿಸಲಾಗಿದೆ ಎಂದು ಸಿವಿ ನಾಗೇಶ್ ವಾದ ಮಂಡಿಸಿದರು.