ಬೆಂಗಳೂರು: ದೇಶಾದ್ಯಂತ 400ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಎನ್.ಡಿ.ಎ. ಗೆಲುವಿನಲ್ಲಿ ಕರ್ನಾಟಕದ ಕೊಡುಗೆ ದೊಡ್ಡದಿರಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಿಳಿಸಿದರು. ಪ್ರತಿ ಪೋಲಿಂಗ್ ಬೂತಿನಲ್ಲಿ ಕಮಲ ಅರಳುವಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿದರು.
ಶಿವಮೊಗ್ಗದಲ್ಲಿ ಇಂದು ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಭ್ರಷ್ಟಾಚಾರ, ತುಷ್ಟೀಕರಣದ ನೀತಿಯನ್ನು ತನ್ನಾಗಿಸಿದ ಇಂಡಿ ಒಕ್ಕೂಟವು ಬಿಜೆಪಿ ಜನಬೆಂಬಲ ಗಮನಿಸಿ ನಿದ್ದೆಗೆಡುವ ಸ್ಥಿತಿ ಬಂದಿದೆ. ಯಡಿಯೂರಪ್ಪ ಅವರ ತಪೋಭೂಮಿ ಇದು. ಕರ್ನಾಟಕದ 28ರಲ್ಲಿ 28 ಸೀಟುಗಳನ್ನೂ ಬಿಜೆಪಿ- ಎನ್‍ಡಿಎಗೆ ಗೆಲ್ಲಿಸಿಕೊಡಿ ಎಂದು ವಿನಂತಿಸಿದರು.
ಕಾಂಗ್ರೆಸ್ ಸುಳ್ಳುಗಳ ಮೂಲಕ ಅಧಿಕಾರಕ್ಕೆ ಬಂತು. ಬಳಿಕ ಕೇಂದ್ರ, ಮೋದಿಯವರ ಮೇಲೆ ಆರೋಪ ಹೊರಿಸುತ್ತಿದೆ. ಕಾಂಗ್ರೆಸ್ ಪಕ್ಷ ಜನರ ಅಭಿವೃದ್ಧಿಗಾಗಿ ಕೆಲಸ ಮಾಡುವುದಿಲ್ಲ. ಕಾಂಗ್ರೆಸ್ ಪಕ್ಷ ಜನರನ್ನು ಲೂಟಿ ಮಾಡಿ ಕಿಸೆ ಭರ್ತಿ ಮಾಡುವ ಕೆಲಸ ಮಾಡುತ್ತದೆ ಎಂದು ಆರೋಪಿಸಿದರು. ಕಾಂಗ್ರೆಸ್ಸಿಗರು ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ರಾಜ್ಯದ ಖಜಾನೆ ಖಾಲಿ ಮಾಡಿದೆ ಎಂದು ಆಕ್ಷೇಪಿಸಿದರು.
ಅನೇಕ ಸಿಎಂಗಳಿರುವ ಕರ್ನಾಟಕ ಸರಕಾರ…
ಕರ್ನಾಟಕದಲ್ಲಿ ಸಿಎಂ, ಭವಿಷ್ಯದ ಸಿಎಂ, ಸೂಪರ್ ಸಿಎಂ, ಶ್ಯಾಡೊ ಸಿಎಂ ಜೊತೆಗೆ ದೆಹಲಿಯ ಕಲೆಕ್ಷನ್ ಸಿಎಂ ಇದ್ದಾರೆ. ಇಲ್ಲಿನ ಜನರು ಕಾಂಗ್ರೆಸ್‍ನ ಸಾಲವನ್ನು ತೀರಿಸುವ ಕೆಲಸ ಮಾಡಬೇಕಾಗಿದೆ. ಕರ್ನಾಟಕದ ಜನರಲ್ಲಿ ಕಾಂಗ್ರೆಸ್ ಸರಕಾರದ ಬಗ್ಗೆ ಸಿಟ್ಟಿದೆ. ಈ ಸಿಟ್ಟಿನಿಂದ ಬಿಜೆಪಿ- ಎನ್‍ಡಿಎ ಸಂಸದರು ಎಲ್ಲ ಸೀಟುಗಳಲ್ಲೂ ಗೆಲ್ಲುವ ವಿಶ್ವಾಸವಿದೆ ಎಂದು ನರೇಂದ್ರ ಮೋದಿಯವರು ತಿಳಿಸಿದರು.
ಅಭಿವೃದ್ಧಿ, ಸಮರ್ಥ ಭಾರತ ಬಿಜೆಪಿ ಆಶಯ. ಕಾಂಗ್ರೆಸ್ ಬಳಿ ವಿಕಾಸದ ಕಾರ್ಯಸೂಚಿ ಇಲ್ಲ. ಕಾಂಗ್ರೆಸ್ ಪಕ್ಷ ಸುಳ್ಳು ಹೇಳುವುದನ್ನೇ ತನ್ನ ಕೆಲಸವಾಗಿ ಮಾಡಿಕೊಂಡಿದೆ. ಎಲ್ಲೇ ಹೋದರೂ ಸುಳ್ಳು ಹೇಳುವುದು, ಸಿಕ್ಕಿ ಬಿದ್ದಾಗ ಹೊಸ ಸುಳ್ಳು ಹೇಳುವುದು ಅವರ ಕಾಯಕ ಎಂದು ಟೀಕಿಸಿದರು. ಕಾಂಗ್ರೆಸ್ ಪಕ್ಷವು ಬಡವರನ್ನು ಇನ್ನಷ್ಟು ಬಡವರನ್ನಾಗಿ ಮಾಡಿದರೆ, ನಾವು ಬಡವರ ಅಭಿವೃದ್ಧಿಗೆ ಶ್ರಮಿಸಿದ್ದೇವೆ ಎಂದು ವಿವರಿಸಿದರು.
ವಿಕಸಿತ ಭಾರತಕ್ಕಾಗಿ, ಅಭಿವೃದ್ಧಿ ಹೊಂದಿದ ಕರ್ನಾಟಕಕ್ಕಾಗಿ ಆತಂಕವಾದ ನಿಲ್ಲಿಸಲು, ರೈತರ ಸಮೃದ್ಧಿ, ಯುವಜನರಿಗೆ ಹೊಸ ಅವಕಾಶಕ್ಕಾಗಿ ‘ಈ ಬಾರಿ 400 ಮೀರಿ’ ಸ್ಥಾನ ಗೆಲ್ಲಿಸಿಕೊಡಿ ಎಂದು ವಿನಂತಿಸಿದರು. ನಾರಿ ಶಕ್ತಿಗೆ ನಾವು ಗರಿಷ್ಠ ಗೌರವ, ಅವಕಾಶ ಕೊಟ್ಟಿದ್ದೇವೆ ಎಂದ ಅವರು, ನಾರಿ ಶಕ್ತಿ ನನಗೆ ಮತದಾರರಾಗಿ ಕಾಣುವುದಿಲ್ಲ; ಅವರು ದೇಶದ ಸುರಕ್ಷಾ ಕವಚ ಎಂದು ಬಣ್ಣಿಸಿದರು. ಕರ್ನಾಟಕದ ಮೂಲೆಮೂಲೆಯಲ್ಲಿ ಬಿಜೆಪಿಗೆ ಅಪಾರ ಜನಬೆಂಬಲ ಸಿಗುತ್ತಿದೆ ಎಂದು ಅವರು ತಿಳಿಸಿದರು. ಕುವೆಂಪು ಅವರೂ ಕರ್ನಾಟಕವನ್ನು ಇದೇ ನಿಟ್ಟಿನಲ್ಲಿ ನೋಡಿದ್ದರು. ಇಂಡಿ ಒಕ್ಕೂಟವು ನಾರಿ ಶಕ್ತಿಯನ್ನು ಅವಮಾನ ಮಾಡುತ್ತಿದೆ ಎಂದು ಟೀಕಿಸಿದರು.
ಇಂಡಿ ಒಕ್ಕೂಟ, ಕಾಂಗ್ರೆಸ್ ಮಹಿಳಾ ಶಕ್ತಿಯ ಅವಮಾನ ಮಾಡುತ್ತಿದೆ. ಇದಕ್ಕೆ ತಕ್ಕ ಉತ್ತರವನ್ನು ನಾರಿ ಶಕ್ತಿ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷವು ವಿಭಜಿಸಿ ಗೆಲ್ಲುವ ಮನಸ್ಥಿತಿ ಹೊಂದಿದೆ. ದೇಶ ವಿಭಜನೆ, ಜಾತಿ ವಿಭಜನೆ, ಧರ್ಮದ ಮೂಲಕ ವಿಭಜನೆ ಮಾಡಿದ ಕಾಂಗ್ರೆಸ್ ಪಕ್ಷವು ವಿಭಜಿಸುವ ತನ್ನ ಮನಸ್ಥಿತಿಯನ್ನೇ ಮುಂದುವರೆಸಿದೆ. ಕರ್ನಾಟಕದ ಕಾಂಗ್ರೆಸ್ ಸಂಸದರು ದೇಶ ವಿಭಜನೆಯ ಮಾತನ್ನಾಡಿದ್ದಾರೆ. ಅಂಥ ಸಂಸದರನ್ನು ವಜಾ ಮಾಡುವ ಬದಲು ಅವರನ್ನು ಬಚಾವ್ ಮಾಡಲು ಕಾಂಗ್ರೆಸ್ ಮುಂದಾಯಿತು. ಇದಕ್ಕೆ ತಕ್ಕ ಪಾಠವನ್ನು ಜನತೆ ನೀಡುವುದು ಖಚಿತ ಎಂದು ನುಡಿದರು.
ಆಯುಷ್ಮಾನ್ ಭಾರತ್ ಯೋಜನೆ ಜಾರಿ, ಕರ್ನಾಟಕದ 40 ಲಕ್ಷಕ್ಕೂ ಹೆಚ್ಚು ಉಚಿತ ಗ್ಯಾಸ್ ಸಿಲಿಂಡರ್ ನೀಡಿಕೆ ಸೇರಿ ಲಕ್ಷಗಟ್ಟಲೆ ಜನರಿಗೆ ಪ್ರಯೋಜನ ಸಿಗುತ್ತಿದೆ. ಎಸ್‍ಸಿ, ಎಸ್‍ಟಿ ಜನರ ಸಶಕ್ತೀಕರಣದ ಮೂಲಕ ಸಾಮಾಜಿಕ ನ್ಯಾಯ ಒದಗಿಸಿದ್ದೇವೆ ಎಂದು ತಿಳಿಸಿದರು. ಎಲ್ಲ ವರ್ಗದ ಜನರಿಗಾಗಿ ಬಿಜೆಪಿ ಶ್ರಮಿಸುತ್ತಿದೆ ಎಂದು ಹೇಳಿದರು. ಭಾರತ ಎಂದರೆ ಆಧುನಿಕತೆ ಎಂಬ ದೃಷ್ಟಿಕೋನ ವಿಶ್ವದಾದ್ಯಂತ ಬಂದಿದೆ. ಇದೇ ವಿಕಾಸವಾದದ ಕಡೆ ಬಿಜೆಪಿ ಸರಕಾರ ಗಮನ ಕೊಟ್ಟಿದೆ ಎಂದು ವಿವರಿಸಿದರು.
ಶಿವಮೊಗ್ಗದ ಜನತೆಗೆ ನನ್ನ ನಮಸ್ಕಾರಗಳು, ಕರ್ನಾಟಕದ ಕೋಟಿ ಕೋಟಿ ಜನರಿಗೆ ನನ್ನ ನಮಸ್ಕಾರಗಳು ಎಂದು ತಿಳಿಸಿ ಭಾಷಣ ಆರಂಭಿಸಿದÀರು. ಸಿಗಂದೂರು ಚೌಡೇಶ್ವರಿಯವರಿಗೆ ನಮನಗಳು ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ಮೋದಿಜೀ ಅವರು ಭಾರತದ ಆಶಾಕಿರಣ. ಅವರು ವಿಶ್ವ ನಾಯಕರು ಎಂದರಲ್ಲದೆ, ಮೋದಿಜೀ ಅವರು ಕರ್ನಾಟಕದಲ್ಲಿ ಚುನಾವಣಾ ರಣಕಹಳೆ ಮೊಳಗಿಸಿದ್ದಾರೆ ಎಂದು ನುಡಿದರು.
ಮೋದಿಜೀ ಅವರ ಸರಕಾರ ಕೇವಲ ಚುನಾವಣೆಗಾಗಿ ಕೆಲಸ ಮಾಡುತ್ತಿಲ್ಲ. ಗಡಿ ಸುರಕ್ಷತೆ, ರೈತರಿಗಾಗಿ ಕಿಸಾನ್ ಸಮ್ಮಾನ್ ಯೋಜನೆ ಜಾರಿ, ಕಾಶ್ಮೀರದ ಸ್ವಾಯತ್ತತೆಗಾಗಿ 370 ವಿಧಿ ರದ್ದು, ಶ್ರೀರಾಮ ಮಂದಿರ ನಿರ್ಮಾಣ ಸೇರಿದಂತೆ ಭಾರತವನ್ನು ವಿಶ್ವದ 5ನೇ ಬಲಿಷ್ಠ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವಂತೆ ಮಾಡಿದ್ದಾರೆ ಎಂದು ತಿಳಿಸಿದರು. ಬಿಜೆಪಿ- ಜೆಡಿಎಸ್ ಸೇರಿ 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲಲು ಶ್ರಮಿಸೋಣ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಫೋನ್ ಮಾಡಿ ಹೇಳಿದ್ದನ್ನು ಜನರ ಗಮನಕ್ಕೆ ತಂದರು.
ಸಂಸದ ಬಿ.ವೈ.ರಾಘವೇಂದ್ರ ಅವರು ಮಾತನಾಡಿ, ಇಲ್ಲಿ ಬಂದ ಜನಸಾಗರದ ಹಿಂದೆ ಬೂತ್ ಮಟ್ಟದ ಕಾರ್ಯಕರ್ತರ ಪರಿಶ್ರಮ, ಹಿರಿಯರ ಪ್ರಯತ್ನ ಇದೆ. ಕೋವಿಡ್ ಸಂದರ್ಭದಲ್ಲಿ ಜನರ ಜೀವ ಉಳಿಸಿದ ಮೋದಿಜೀ ಅವರನ್ನು ನೋಡಲು ಮತ್ತು ಅವರ ನೇತೃತ್ವದ ಬಿಜೆಪಿಯನ್ನು ಆಯ್ಕೆ ಮಾಡಲು ಜನರು ಇಲ್ಲಿ ಬಂದಿದ್ದಾರೆ ಎಂದು ನುಡಿದರು.
ಶಿವಮೊಗ್ಗ ಕ್ಷೇತ್ರಕ್ಕೆ ಗರಿಷ್ಠ ಅನುದಾನ ತರಲು ಸಾಧ್ಯವಾಗಿದೆ. ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಿವೆ ಎಂದು ವಿವರಿಸಿದರು. ಶಿವಮೊಗ್ಗಕ್ಕೆ ವೈದ್ಯಕೀಯ ಕಾಲೇಜು, ಆಯುರ್ವೇದ ಕಾಲೇಜು, ಪಾಸ್‍ಪೋರ್ಟ್ ಕೇಂದ್ರ ಸೇರಿ ಅನೇಕ ಸಂಸ್ಥೆಗಳು ಬಂದಿವೆ. ಮೋದಿಜಿ ಅವರ ಆಶೀರ್ವಾದ, ಯಡಿಯೂರಪ್ಪ ಅವರ ನೇತೃತ್ವದಲ್ಲಿ ಇದೆಲ್ಲವೂ ಆಗಿವೆ ಎಂದು ತಿಳಿಸಿದರು. ನಿಮ್ಮ ರಾಘಣ್ಣ ದೇವರು ಮೆಚ್ಚುವಂತೆ ಕೆಲಸ ಮಾಡಿದ್ದನ್ನು ಗಮನಿಸಿ ಹೆಚ್ಚು ಮತಗಳಿಂದ ಗೆಲ್ಲಿಸಿ. ಅಲ್ಲದೆ, ಮತ್ತು ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿ ಎಂದು ಮನವಿ ಮಾಡಿದರು.
ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಮಾತನಾಡಿ, ಅಭಿವೃದ್ಧಿ ಜೊತೆಗೆ ಹಿಂದುತ್ವದ ಬದ್ಧತೆಯ ರಾಜಕಾರಣವನ್ನು ಬಿಜೆಪಿ ಮಾಡುತ್ತಿದೆ. ಅದರ ಪ್ರತೀಕವೇ ರಾಮಲಲಾ ಮೂರ್ತಿ ಪ್ರತಿಷ್ಠಾಪನೆ ಎಂದು ತಿಳಿಸಿದರು. ರಾಜ್ಯದಲ್ಲಿ ಮಾತ್ರವಲ್ಲ ದೇಶದಲ್ಲಿ ಕೇಸರಿಯ ಗಾಳಿ ಬೀಸುತ್ತಿದೆ. ದೇಶದ ಜನ ಮೋದಿ ಮತ್ತೊಮ್ಮೆ ಎಂದು ಹೇಳುತ್ತಿದ್ದಾರೆ ಎಂದು ವಿಶ್ಲೇಷಿಸಿದರು.
ತುಕಡೇ ಗ್ಯಾಂಗ್ ಮತ್ತು ರಾಷ್ಟ್ರಭಕ್ತರ ನಡುವಿನ ಚುನಾವಣೆ ಇದು. ಜಾತಿ- ನೀತಿ ನಡುವಿನ ಚುನಾವಣೆ ಇದು. ರಾಷ್ಟ್ರಭಕ್ತರು, ನೀತಿಯ ಗೆಲುವಿಗೆ, ಆತ್ಮನಿರ್ಭರ ಭಾರತಕ್ಕಾಗಿ, ವಿಶ್ವಗುರು ಭಾರತಕ್ಕಾಗಿ ಬಿಜೆಪಿಗೆ ಮತ ಕೊಡಿ ಎಂದು ಮನವಿ ಮಾಡಿದರು.
ಉಡುಪಿ- ಚಿಕ್ಕಮಗಳೂರು ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಸಮರ್ಥ, ಶಕ್ತಿಶಾಲಿ, ಸಮೃದ್ಧ ಭಾರತ ನಿರ್ಮಾಣಕ್ಕಾಗಿ ಮೋದಿಜೀ ಅವರ ನೇತೃತ್ವದ ಬಿಜೆಪಿಗೆ ಮತ ಕೊಡಿ ಎಂದು ವಿನಂತಿಸಿದರು. ಅನ್ನಭಾಗ್ಯ ಸೇರಿ ಅನೇಕ ಯೋಜನೆಗಳಿಗೆ ಕೇಂದ್ರದಿಂದ ನೆರವು ಬರುತ್ತಿದೆ ಎಂದು ಅವರು ವಿವರಿಸಿದರು. ರಾಮಮಂದಿರದ ಕುರಿತ ಕಾಂಗ್ರೆಸ್ ನಿಲುವು ನಾಚಿಕೆಗೇಡಿನದು ಎಂದು ಟೀಕಿಸಿದರು.
ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ದಕ್ಷಿಣ ಕನ್ನಡದ ಅಭ್ಯರ್ಥಿ ಕ್ಯಾಪ್ಟನ್ ಬೃಜೇಶ್ ಚೌಟ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್, ಶಾಸಕ ಸುನೀಲ್ ಕುಮಾರ್, ರಾಜ್ಯ ಉಪಾಧ್ಯಕ್ಷ ಬೈರತಿ ಬಸವರಾಜು, ಮಾಜಿ ಸಚಿವ ಅರಗ ಜ್ಞಾನೇಂದ್ರ, ಹಿರಿಯರಾದ ಡಿ.ಎಚ್.ಶಂಕರಮೂರ್ತಿ, ದಾವಣಗೆರೆ ಅಭ್ಯರ್ಥಿ ಶ್ರೀಮತಿ ಗಾಯತ್ರಿ ಸಿದ್ದೇಶ್ವರ್, ಸಂಸದ ಜಿ.ಎಂ.ಸಿದ್ದೇಶ್ವರ್, ಶಾಸಕಿ ಶ್ರೀಮತಿ ಶಾರದಾ ಪೂರ್ಯಾನಾಯಕ್, ಮುಖ್ಯ ಸಚೇತಕ ಎನ್.ರವಿಕುಮಾರ್, ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಕು.ಮಂಜುಳಾ, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಗುರುರಾಜ್ ಗಂಟಿಹೊಳಿ, ವಿಧಾನಪರಿಷತ್ ಸದಸ್ಯೆ ಶ್ರೀಮತಿ ಭಾರತಿ ಶೆಟ್ಟಿ, ಶಾಸಕರು, ಮಾಜಿ ಶಾಸಕರು, ಪಕ್ಷದ ರಾಜ್ಯ, ಜಿಲ್ಲಾ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು ವೇದಿಕೆಯ ಮೇಲಿದ್ದರು.
BREAKING: ‘ರಾಜ್ಯ ಸರ್ಕಾರಿ ನೌಕರ’ರಿಗೆ ಗುಡ್ ನ್ಯೂಸ್: ನಾಳೆ ‘ವಿಶೇಷ ಸಾಂದರ್ಭಿಕ ರಜೆ’ ಮಂಜೂರು
ಶೇ.60ರಷ್ಟು ‘ಕನ್ನಡ ಬೋರ್ಡ್’ ಹಾಕದ ಮಳಿಗೆಗಳಿಗೆ ಬೀಗ ಹಾಕುವಂತಿಲ್ಲ: ರಾಜ್ಯ ಸರ್ಕಾರಕ್ಕೆ ‘ಹೈಕೋರ್ಟ್’ ಸೂಚನೆ