ಬಳ್ಳಾರಿ: ಜಿಲ್ಲೆಯಲ್ಲಿ ಆಯುಷ್ಮಾನ್ ಭವ ಆರೋಗ್ಯ ಕಾರ್ಯಕ್ರಮದಡಿ ಅಂಗಾಂಗ ದಾನ ನೋಂದಣಿ ಅಭಿಯಾನ ನಡೆಯುತ್ತಿದ್ದು, ನಗರದ ಕೌಲ್ ಬಜಾರ್ ವ್ಯಾಪ್ತಿಯಲ್ಲಿ ಬುಧವಾರ ಒಂದೇ ದಿನ 100 ಕ್ಕೂ ಅಧಿಕ ಜನರು ತಮ್ಮ ಅಂಗಾಂಗ ದಾನ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು ಅವರು ತಿಳಿಸಿದ್ದಾರೆ.
ಜನತೆಯು ಸಾಮಾನ್ಯವಾಗಿ ಹಿಂದೇಟು ಹಾಕುವ ಅಂಗಾಂಗ ದಾನ ನೋಂದಣಿಗೆ ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ನಿರಂತರ ಅರಿವು ಮತ್ತು ಮನವರಿಕೆ ಮಾಡುವ ಕಾರ್ಯ ನಡೆಯುತ್ತಿದೆ. ಅದೇರೀತಿಯಾಗಿ ವೈದ್ಯಾಧಿಕಾರಿ ಡಾ.ಸುರೇಖಾ ಅವರ ನೇತೃತ್ವದಲ್ಲಿ ಒಂದೇ ದಿನ 102 ಜನರು ಅಂಗಾಂಗ ದಾನದಡಿ ನೋಂದಣಿ ಮಾಡಿಸುವ ಮೂಲಕ ಬ್ರೂಸ್ ಪೇಟೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಕೀಯ ತಂಡ ವಿಭಿನ್ನ ಸಾಧನೆ ಮಾಡಿದ್ದಾರೆ ಎಂದು ಡಾ.ವೈ ರಮೇಶಬಾಬು ಅವರು ತಿಳಿಸಿದ್ದಾರೆ. ಬಳ್ಳಾರಿ ನಗರದ ಮುಸ್ಲಿಂ ಸಮುದಾಯ ಹೆಚ್ಚಿರುವ ಕೌಲ್‍ಬಜಾರ್ ವ್ಯಾಪ್ತಿಯ, ಬಟ್ಟಿ ಏರಿಯಾ, ಕೊರಚಗೇರಿ, ದೋಬಿ ಘಾಟ್‍ನಲ್ಲಿ ಆರೋಗ್ಯ ಇಲಾಖೆ ತಂಡದಿಂದ ನಿರಂತರ ಅರಿವು ಮೂಡಿಸುವ ಮೂಲಕ ಅಧಿಕ ಜನ ನೋಂದಣಿ ಮಾಡಿಕೊಂಡಿದ್ದಾರೆ.
ಈ ಹಿನ್ನಲೆಯಲ್ಲಿ ಸಿಬ್ಬಂದಿಯವರಾದ ಎಸ್.ತುಳಸಿ, ಚೈತ್ರಾ ಡಿ.ಎಸ್, ಹಾಲಮ್ಮ, ಅರುಣಾ ಜ್ಯೋತಿ, ಪ್ರಸನ್ನ ಜ್ಯೋತಿ, ಮರಿಸ್ವಾಮಿ, ದೀಪಾ, ಶಿಲ್ಪಾ, ಗಂಗಾಧರ ಸೇರಿದಂತೆ ಆಶಾ ಕಾರ್ಯಕರ್ತೆಯರು ಪ್ರತಿಯೊಬ್ಬರಿಗೂ ಜಾಗೃತಿ ಮತ್ತು ಮನವರಿಕೆ ಮಾಡಿ ನೋಂದಣಿ ಮಾಡಿಸಿದ್ದಾರೆ.
ಮರಣಾನಂತರ 06 ಗಂಟೆಯ ಒಳಗೆ ದೇಹದ ಅಂಗಾಂಗಗಳಲ್ಲಿನ ಕಣ್ಣು, ಹೃದಯ, ಕಿಡ್ನಿ, ಲೀವರ್, ಮೇದೋಜಿರಕಗ್ರಂಥಿ,ಕರಳು ದಾನ ಮಾಡಬಹುದು. ಮುಖ್ಯವಾಗಿ ಕುಟುಂಬ ಸದಸ್ಯರ ಒಪ್ಪಿಗೆ ಮೇರೆಗೆ ಈ ಅಂಗಗಳನ್ನು ದಾನ ಮಾಡಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಮೇಶ್ ಬಾಬು ಅವರು ತಿಳಿಸಿದ್ದಾರೆ.
*ಯಾರು ನೋಂದಣಿ ಮಾಡಿಕೊಳ್ಳಬಹುದು?:*
18 ವರ್ಷ ತುಂಬಿದ ಪ್ರತಿಯೊಬ್ಬರೂ ತಮ್ಮ ದೇಹದ ಅಂಗಾಂಗ ದಾನ ನೋಂದಣಿ ಮಾಡಿಕೊಳ್ಳಬಹುದಾಗಿದೆ.
*ಮೊಬೈಲ್ ಮೂಲಕವೂ ಅಂಗಾಂಗ ದಾನ ನೋಂದಣಿ:*
ಅಂಗಾಂಗ ದಾನ ನೋಂದಣಿಗೆ ಮೊಬೈಲ್ ಮೂಲಕವೂ ನೋಂದಣಿ ಮಾಡಿಕೊಳ್ಳಬಹುದು. ಆಂಡ್ರ್ಯಾಂಡ್ ಮೊಬೈಲ್ ನ ಗೂಗಲ್‍ನಲ್ಲಿ NOTTO.ABDM.GOV.IN ಎಂದು ಟೈಪ್ ಮಾಡಿ ಲಿಂಕ್ ಒಪನ್ ಮಾಡಬೇಕು. ನಂತರ Registration for Pledge ನ್ನು Open ಮಾಡಿದ ನಂತರ ಕೇಳುವ ವಿವರಣೆಯಲ್ಲಿ Adhaar Number entry ಮಾಡಬೇಕು. Verify ಯನ್ನು Click ಮಾಡಬೇಕು. ನಂತರದಲ್ಲಿ OTP ಯನ್ನು ಹಾಕಿದ ನಂತರ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು.
ನೋಂದಾವಣೆ ಮಾಡಿಸಿದವರ ಮಾಹಿತಿಯನ್ನು ಸ್ಕ್ರೋಲ್ ಮಾಡಿದಾಗ ಅಲ್ಲಿ ಕೇಳುವಂತೆ ತಂದೆ/ಗಂಡ ಮತ್ತು ತಾಯಿಯ ಹೆಸರು ನಮೂದಿಸಬೇಕು. ನಮ್ಮ ರಕ್ತದ ಗುಂಪು ನಮೂದಿಸಬೇಕು. ಅಲ್ಲಿ ದಾನಕ್ಕೆ ಆಯ್ಕೆ ಮಾಡುವ ಅಂಗಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ತುರ್ತು ಸಂಪರ್ಕಕ್ಕಾಗಿ ಕುಟುಂಬದ ಸದಸ್ಯರ ಹೆಸರು ಹಾಗೂ ಮೊಬೈಲ್ ನಂಬರ್ ನೋಂದಾಯಿಸಬೇಕು. ಕೊನೆಯಲ್ಲಿ Motivation ಮಾಡಿದ Option ನಲ್ಲಿ ಎರಡು ಬಾರಿಯು NATTO ವನ್ನು ಆಯ್ಕೆ ಮಾಡಿ SUBMIT ಮಾಡಬೇಕು. ನಂತರದಲ್ಲಿ ಸರ್ಟಿಫಿಕೇಟ್ ಡೌನ್‍ಲೊಡ್ ಮಾಡಿಕೊಳ್ಳಬೇಕು. *ಬಳ್ಳಾರಿ ಜಿಲ್ಲೆಯ ಸಾಧನೆ:* ಜಿಲ್ಲೆಯಲ್ಲಿ 3700 ಜನರ ಅಂಗಾಂಗ ದಾನ ನೋಂದಣಿ ಮಾಡಿಸುವ ಮೂಲಕ ರಾಷ್ಟ ಮಟ್ಟದಲ್ಲಿ ಎರಡನೇಯ ಸ್ಥಾನದಲ್ಲಿದೆ.