ಬೆಂಗಳೂರು : ಒಂದು ದೇಶ ಒಂದು ಚುನಾವಣೆಗೆ ಕೇಂದ್ರ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿರುವ ವಿಚಾರವಾಗಿ ಇದೀಗ ಪರ ಮತ್ತು ವಿರೋಧ ಚರ್ಚೆಗಳು ಪ್ರಾರಂಭವಾಗಿದ್ದು, ಬೆಂಗಳೂರಿನಲ್ಲಿ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿಯವರು ರಾತ್ರಿ ಒಂದು ಕನಸು ಕಾಣುತ್ತಾರೆ ಅದನ್ನು ನನಸು ಮಾಡಲು ಮರುದಿನ ಸಂಪುಟ ಸಭೆ ಕರೆಯುತ್ತಾರೆ ಎಂದು ವ್ಯಂಗ್ಯವಾಡಿದರು.
ಬೆಂಗಳೂರಿನಲ್ಲಿ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದು, ಒಂದು ದೇಶ ಒಂದು ಚುನಾವಣೆಯ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ರಾಜ್ಯ ಸರ್ಕಾರಗಳ ಜೊತೆ ಕೇಂದ್ರ ಸರ್ಕಾರ ಚರ್ಚೆ ಮಾಡಬೇಕಿತ್ತು. ದೇಶದಲ್ಲಿ ಹಲವು ರೀತಿಯಲ್ಲಿ ಚುನಾವಣೆ ನಡೆಯುತ್ತದೆ ಇದನ್ನು ಹೇಗೆ ಮಾಡಬೇಕೆಂದು ರಾಜ್ಯಗಳ ಜೊತೆ ಕೇಂದ್ರ ಸರ್ಕಾರ ಚರ್ಚಿಸಬೇಕಿತ್ತು ಎಂದರು.
ಪಂಚಾಯಿತಿಯಿಂದ ಪಾರ್ಲಿಮೆಂಟ್ ಅವರಿಗೆ ಚುನಾವಣೆ ನಡೆಸುತ್ತೀರಾ? ಪಾರ್ಲಿಮೆಂಟ್ ನಿಂದ ಅಸೆಂಬ್ಲಿ ಚುನಾವಣೆ ಮಾತ್ರ ನಡೆಸುತ್ತೀರಾ? ಎಲ್ಲವೂ ಕೂಡ ಚರ್ಚೆ ಆಗಬೇಕು. ಒಂದು ಕಡೆ ಒಂದು ದೇಶ ಒಂದು ಚುನಾವಣೆ ಅಂತ ಹೇಳುತ್ತಾರೆ. ಮತ್ತೊಂದು ಕಡೆ ಬಹುಮತ ಬರದಿದ್ದರೆ ಆಪರೇಷನ್ ಕಮಲ ಮಾಡುತ್ತಾರೆ ಎಂದು ಬಿಜೆಪಿ ವಿರುದ್ಧ ಸಚಿವ ಪ್ರಿಯಾಂಕರಿಗೆ ತೀವ್ರ ವಾಗ್ದಾಳಿ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿಯವರು ರಾತ್ರಿ ಒಂದು ಕನಸು ಕಾಣುತ್ತಾರೆ ಆ ಕನಸು ನನಸು ಮಾಡಲು ಮರುದಿನ ಸಂಪುಟ ಸಭೆ ಮಾಡುತ್ತಾರೆ ಎಂದು ಪ್ರಿಯಾಂಕ ಖರ್ಗೆ ವ್ಯಂಗ್ಯವಾಡಿದರು. ಬಿಜೆಪಿಯವರು ಆಪರೇಷನ್ ಕಮಲ ಮಾಡುವುದನ್ನು ನಿಲ್ಲಿಸಿದರೆ ಚುನಾವಣಾ ವೆಚ್ಚ ಸ್ವಾಭಾವಿಕವಾಗಿ ಕಡಿಮೆಯಾಗುತ್ತದೆ. ಮೊದಲು ಬಿಜೆಪಿಯವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಬೆಂಗಳೂರಿನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.