ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಪ್ರಧಾನಿಯವರ ಆರ್ಥಿಕ ಸಲಹಾ ಮಂಡಳಿಯ (EAC-PM) ಸದಸ್ಯರೊಂದಿಗೆ ಸಭೆ ನಡೆಸಿದರು. ಜಾಗತಿಕ ಅನಿಶ್ಚಿತತೆಯ ನಡುವೆಯೂ ಭಾರತದ ಆರ್ಥಿಕ ಬೆಳವಣಿಗೆಯನ್ನು ಮತ್ತಷ್ಟು ವೇಗಗೊಳಿಸಲು ಅಗತ್ಯವಿರುವ ವಿವಿಧ ಕಲ್ಪನೆಗಳು ಮತ್ತು ಕ್ರಮಗಳ ಕುರಿತು ಅವರು ಚರ್ಚಿಸಿದರು.
ನವದೆಹಲಿಯಲ್ಲಿ ನಡೆದ ಈ ಸಭೆಯಲ್ಲಿ, ಜನರ ಜೀವನವನ್ನು ಸುಲಭಗೊಳಿಸಲು (Ease of Living) ಮತ್ತು ವ್ಯಾಪಾರವನ್ನು ಸುಲಭಗೊಳಿಸಲು (Ease of Doing Business) ಕೈಗೊಳ್ಳಬೇಕಾದ ವಿವಿಧ ಸುಧಾರಣೆಗಳ ಬಗ್ಗೆಯೂ ಚರ್ಚಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಜಾಗತಿಕ ಪ್ರಕ್ಷುಬ್ಧತೆಯ ಈ ಸಮಯದಲ್ಲಿ ಭಾರತದ ಆರ್ಥಿಕ ಪ್ರಗತಿಯನ್ನು ಇನ್ನಷ್ಟು ಬಲಪಡಿಸುವ ದೃಷ್ಟಿಯಿಂದ ಪ್ರಧಾನಿ ಮತ್ತು ಮಂಡಳಿಯ ಸದಸ್ಯರು ಹಲವು ವಿಚಾರಗಳ ಕುರಿತು ವಿಸ್ತೃತವಾಗಿ ಸಮಾಲೋಚನೆ ನಡೆಸಿದರು.
ಸಭೆಯಲ್ಲಿ ಪಶ್ಚಿಮ ಏಷ್ಯಾದ ಸಂಘರ್ಷವು ಭಾರತ ಮತ್ತು ವಿಶ್ವದ ಮೇಲೆ ಬೀರಬಹುದಾದ ಪರಿಣಾಮಗಳ ಕುರಿತು ಮಂಡಳಿಯ ಸದಸ್ಯರು ತಮ್ಮ ಮೌಲ್ಯಮಾಪನವನ್ನು ಪ್ರಧಾನಿಯವರ ಮುಂದಿಟ್ಟರು.








