ಕಲಬುರ್ಗಿ : 22ರಂದು ಅಯೋಧ್ಯ ಶ್ರೀ ರಾಮ ಮಂದಿರ ಉದ್ಘಾಟನೆ ಹಾಗೂ ರಾಮಮೂರ್ತಿ ಪ್ರತಿಷ್ಠಾಪನ ಕಾರ್ಯಕ್ರಮ ನೆಡೆವೆಯು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇವತ್ತು ಒಂದೇ ದಿನ ಮೂರು ರಾಜ್ಯಗಳಿಗೆ ಭೇಟಿ ನೀಡಲಿದ್ದಾರೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಮೋದಿ ಕಲಬುರ್ಗಿಗೆ ಆಗಮಿಸಲಿದ್ದು ಅಲ್ಲಿಂದ ನಂತರ ಸೋಲಾಪುರಕ್ಕೆ ತೆರಳಲಿದ್ದಾರೆ ಅಲ್ಲಿಂದ ಮತ್ತೆ ಕಲಬುರ್ಗಿಗೆ ಬಂದು ಇಲ್ಲಿಂದ ವಿಮಾನದಲ್ಲಿ ಬೆಂಗಳೂರಿಗೆ ತೆರಳಲಿದ್ದಾರೆ.
ಈಗಾಗಲೇ ಕಲಬುರ್ಗಿಯ ವಿಮಾನ ನಿಲ್ದಾಣದಲ್ಲಿ ಈ ಭಾಗದ ಸಂಸದರು ಸಚಿವರು ಶಾಸಕರು ಹಾಗೂ ಮಾಜಿ ಶಾಸಕರು ಸೇರಿದಂತೆ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಆಗಮಿಸಿದ್ದಾರೆ. ಸಚಿವ ಶರಣಪ್ರಕಾಶ್ ಪಾಟೀಲ್ ಅವರು ಪ್ರಧಾನಿ ಮೋದಿ ಅವರನ್ನು ಕಲಬುರ್ಗಿ ನಗರಕ್ಕೆ ಬರಮಾಡಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಕಲಬುರಗಿ ಏರ್‌ಪೋರ್ಟ್ ಸುತ್ತಮುತ್ತ 10 ಕಿ.ಮೀ. ವ್ಯಾಪ್ತಿಯಲ್ಲಿ ಡ್ರೋಣ್ ಕ್ಯಾಮರಾ ಹಾರಾಟ ನಿಷೇಧಿಸಲಾಗಿದೆ. ಭದ್ರತಾ ದೃಷ್ಟಿಯಿಂದ ಡ್ರೋಣ್ ಕ್ಯಾಮರಾ ಬಳಕೆಯನ್ನು ಜಿಲ್ಲಾಡಳಿತವು ನಿಷೇಧಿಸಿದೆ. CRPC ಸೆಕ್ಷನ್ 144 ಅಡಿಯಲ್ಲಿ ಡ್ರೋನ್ ಕ್ಯಾಮರಾ ಹಾರಾಟ ನಿಷೇಧಿಸಲಾಗಿದ್ದು, ಇಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಯಾರು ಕೂಡ ಡ್ರೋಣ್ ಹಾರಿಸುವಂತಿಲ್ಲ.
ಮೋದಿ ಅವರು ಬೆಳಗ್ಗೆ 9.35ಕ್ಕೆ ದೆಹಲಿಯಿಂದ ಹೊರಟು ನೇರವಾಗಿ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಇಲ್ಲಿಂದ 9.40ಕ್ಕೆ ಹೆಲಿಕಾಫ್ಟರ್ ಮೂಲಕ ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ತೆರಳಲಿದ್ದಾರೆ. ಅಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ ಫಾಲಾನುಭವಿಗಳಿಗೆ ಹಕ್ಕು ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಭಾಗಿಯಾಗಿ,ಬಳಿಕ ಮಧ್ಯಾಹ್ನ 12.10ಕ್ಕೆ ಭಾರತೀಯ ವಾಯುಸೇನೆ ಹೆಲಿಕಾಫ್ಟರ್ ಮೂಲಕ ಸೊಲ್ಲಾಪುರದಿಂದ ಮತ್ತೆ ಮಧ್ಯಾಹ್ನ 1 ಗಂಟೆಗೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಲಿದ್ದಾರೆ.
ಸೊಲ್ಲಾಪುರದಿಂದ ಮಧ್ಯಾಹ್ನ 1 ಗಂಟೆಗೆ ಕಲಬುರಗಿ ಏರ್ಪೋರ್ಟ್ಗೆ ವಾಪಸ್ ಆಗಲಿರುವ ಪ್ರಧಾನಿ ಮೋದಿ ಅವರನ್ನು ಸ್ಥಳೀಯ ಬಿಜೆಪಿ ನಾಯಕರ ಭೇಟಿಗೆ ಅವಕಾಶ ನೀಡಲಾಗಿದೆ. ಕಲಬುರಗಿ ಭಾಗದ ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರ ಜೊತೆ ಮೋದಿ ಚರ್ಚೆ ನಡೆಸಲಿದ್ದಾರೆ. ಲೋಕಸಭಾ ಚುನಾವಣೆ ಸಿದ್ಧತೆ ಸೇರಿ ಹಲವು ವಿಷಯಗಳ ಬಗ್ಗೆ ಸುಮಾರು ಅರ್ಧ ಗಂಟೆಗಳ ಕಾಲ ಚರ್ಚಿಸಲಿದ್ದಾರೆ. ಬಳಿಕ ಬೆಂಗಳೂರಿಗೆ ತೆರಳಲಿದ್ದಾರೆ.
ಭಟ್ಟರಮಾರನಹಳ್ಳಿ 2.45ಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿ, ಬಿಐಇಟಿಸಿ ಉದ್ಘಾಟನೆ ಮತ್ತು ಬೋಯಿಂಗ್ ಸುಕನ್ಯಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ 3.45ಕ್ಕೆ ಭಟ್ಟರ ಮಾರನಹಳ್ಳಿಯಿಂದ ನಿರ್ಗಮಿಸಿ, 3.55ಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಲಿದ್ದಾರೆ. ಸಂಜೆ 4 ಗಂಟೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಚೆನ್ನೈಗೆ ತೆರಳಲಿದ್ದಾರೆ.
ಇಂದು ಮಧ್ಯಾಹ್ನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಧಾನಿ ಮೋದಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಾಗತಿಸಲಿದ್ದಾರೆ. ಬೋಯಿಂಗ್ ಇಂಡಿಯಾ ಇಂಜಿನಿಯರಿಂಗ್ ಕೇಂದ್ರ ಉದ್ಘಾಟನೆ ಕಾರ್ಯಕ್ರಮದಲ್ಲಿ ಮೋದಿ ಜೊತೆ ಸಿದ್ದರಾಮಯ್ಯ ಅವರು ವೇದಿಕೆ ಹಂಚಿಕೊಳ್ಳಲಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2024 ರ ಜನವರಿ 20-21 ರಂದು ತಮಿಳುನಾಡಿನ ವಿವಿಧ ದೇವಾಲಯಗಳಿಗೆ ಭೇಟಿ ನೀಡಲಿದ್ದಾರೆ. ಜನವರಿ 20 ರಂದು, ಸುಮಾರು 11 ಗಂಟೆಗೆ, ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿರುವ ಶ್ರೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ. ಈ ದೇವಾಲಯದಲ್ಲಿ ವಿವಿಧ ವಿದ್ವಾಂಸರು ಕಂಬ ರಾಮಾಯಣದ ಪದ್ಯಗಳನ್ನು ಪಠಿಸುವುದನ್ನು ಪ್ರಧಾನ ಮಂತ್ರಿಗಳು ಆಲಿಸಲಿದ್ದಾರೆ.
ನಂತರ ಪ್ರಧಾನಿಯವರು ಮಧ್ಯಾಹ್ನ 2 ಗಂಟೆಗೆ ರಾಮೇಶ್ವರಂ ತಲುಪಿ ಶ್ರೀ ಅರುಲ್ಮಿಗು ರಾಮನಾಥಸ್ವಾಮಿ ದೇವಸ್ಥಾನದಲ್ಲಿ ದರ್ಶನ ಮತ್ತು ಪೂಜೆ ನೆರವೇರಿಸಲಿದ್ದಾರೆ. ಕಳೆದ ಕೆಲವು ದಿನಗಳಲ್ಲಿ ಪ್ರಧಾನಮಂತ್ರಿಯವರು ಅನೇಕ ದೇವಾಲಯಗಳಿಗೆ ಭೇಟಿ ನೀಡಿದಾಗ ಆಚರಿಸಲಾಗುತ್ತಿರುವ ಅಭ್ಯಾಸವನ್ನು ಮುಂದುವರೆಸಿ, ಅವರು ಈ ದೇವಾಲಯದಲ್ಲಿ ವಿವಿಧ ಭಾಷೆಗಳಲ್ಲಿ (ಮರಾಠಿ, ಮಲಯಾಳಂ ಮತ್ತು ತೆಲುಗು ಮುಂತಾದ) ರಾಮಾಯಣ ಪಠಣದಲ್ಲಿ ಪಾಲ್ಗೊಳ್ಳುತ್ತಾರೆ. ಅದೇ ವೇಳೆ ಈ ದೇವಾಲಯದಲ್ಲಿ ‘ಶ್ರೀ ರಾಮಾಯಣ ಪಾರಾಯಣ’ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಎಂಟು ವಿಭಿನ್ನ ಸಾಂಪ್ರದಾಯಿಕ ಮಂಡಲಿಗಳು ಸಂಸ್ಕೃತ, ಅವಧಿ, ಕಾಶ್ಮೀರಿ, ಗುರುಮುಖಿ, ಅಸ್ಸಾಮಿ, ಬೆಂಗಾಲಿ, ಮೈಥಿಲಿ ಮತ್ತು ಗುಜರಾತಿ ರಾಮಕಥೆಗಳನ್ನು ಪಠಿಸುತ್ತಾರೆ. ಶ್ರೀ ಅರುಲ್ಮಿಗು ರಾಮನಾಥಸ್ವಾಮಿ ದೇವಸ್ಥಾನದಲ್ಲಿ, ಪ್ರಧಾನಿ ಭಜನಾ ಸಂಧ್ಯಾದಲ್ಲಿ ಭಾಗವಹಿಸುತ್ತಾರೆ. ಜನವರಿ 21 ರಂದು ಧನುಷ್ಕೋಡಿಯ ಕೋದಂಡರಾಮಸ್ವಾಮಿ ದೇವಸ್ಥಾನದಲ್ಲಿ ಪ್ರಧಾನಮಂತ್ರಿ ದರ್ಶನ ಮತ್ತು ಪೂಜೆ ನೆರವೇರಿಸಲಿದ್ದಾರೆ. ಧನುಷ್ಕೋಡಿ ಬಳಿ, ರಾಮಸೇತುವನ್ನು ನಿರ್ಮಿಸಿದ ಸ್ಥಳ ಎಂದು ಹೇಳಲಾಗುವ ಅರಿಚಲ್ ಮುನೈಗೆ ಪ್ರಧಾನಿ ಭೇಟಿ ನೀಡಲಿದ್ದಾರೆ.