ದಾವಣಗೆರೆ : ಮಹಿಳೆಯರ ಮೇಲೆ ಅತ್ಯಾಚಾರ ದೌರ್ಜನ್ಯ ನಡೆದಾಗ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅತ್ಯಾಚಾರಿಗಳ ಪರ ನಿಲ್ಲುತ್ತಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಗಿರುವ ಪ್ರಿಯಾಂಕಾ ಗಾಂಧಿ ಗಂಭೀರವಾದಂತಹ ಆರೋಪ ಮಾಡಿದರು.
ನಿನ್ನೆ ದಾವಣಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವಂತಹ ಪ್ರಭಾ ಮಲ್ಲಿಕಾರ್ಜುನ್ ಅವರ ಪರವಾಗಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ಪ್ರಿಯಾಂಕಾ ಗಾಂಧಿಯವರು ಸಾವಿರಾರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಸಂಸದನ ಜೊತೆಗೆ ವೇದಿಕೆಯಲ್ಲಿ ಪ್ರಧಾನಿ ಮೋದಿ ಕಾಣಿಸಿಕೊಳ್ಳುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಸಂಸದನ ಕುಕೃತ್ಯದ ವಿಚಾರ ಬಹಿರಂಗ ಆಗುತ್ತಿದ್ದಂತೆಯೇ ಆತ ವಿದೇಶಕ್ಕೆ ಓಡಿ ಹೋದರೂ ಪ್ರಧಾನಿ, ಗೃಹ ಮಂತ್ರಿಗೆ ಗೊತ್ತೇ ಆಗುವುದಿಲ್ಲ. ಪ್ರಧಾನಿ ಮೋದಿ, ಗೃಹ ಮಂತ್ರಿಗೆ ದೇಶದ ಪ್ರತಿಯೊಬ್ಬ ನಾಯಕರು, ಮುಖಂಡರ ಚಲನವಲನಗಳ ಇಂಚಿಂಚೂ ಮಾಹಿತಿ ಇರುತ್ತದೆ. ಅಂಥದ್ದರಲ್ಲಿ ಸಾವಿರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಸಂಸದ ವಿದೇಶಕ್ಕೆ ಹೋದ ಬಗ್ಗೆ ಮಾಹಿತಿ ಇರುವುದಿಲ್ಲವೇ ಎಂದು ಪ್ರಶ್ನಿಸಿದರು.