ಹಾವೇರಿ: ಗಾಯಗೊಂಡಾಗ, ಗಾಯವಾದಾಗ ಅದು ದೊಡ್ಡದಿದ್ದಾಗ ಸ್ಟಿಚ್ ಹಾಕುವುದು ಸರ್ವೇ ಸಾಮಾನ್ಯ. ಆದರೇ ರಾಜ್ಯದಲ್ಲೊಂದು ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್ ಮಹಾ ಎಡವಟ್ಟು ಎನ್ನುವಂತೆ ಗಾಯಕ್ಕೆ ಹೊಲಿಗೆ ಹಾಕೋ ಬದಲು ಫೆವಿಕ್ವಿಕ್ ಹಾಕಿ ಕಳುಹಿಸಿದ್ದಾರೆ. ಇದರಿಂದಾಗಿ ಬಾಲಕ ನರಳಾಡುತ್ತಿರುವಂತ ಘಟನೆ ಹಾವೇರಿಯಲ್ಲಿ ನಡೆದಿದೆ.
ಹಾವೇರಿ ಜಿಲ್ಲೆಯ ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಟವಾಡುತ್ತಿದ್ದಾಗ ಬಿದ್ದು ಗಾಯಗೊಂಡಿದ್ದಂತ 7 ವರ್ಷದ ಬಾಲಕ ಗುರುಶಿಕನ್ ಅಣ್ಣಪ್ಪ ಹೊಸಮನಿಯನ್ನು ಕರೆದುಕೊಂಡು ಹೋಗಲಾಗಿತ್ತು.
ವೈದ್ಯರಿಲ್ಲದ ಕಾರಣ ನರ್ಸ್ ಜ್ಯೋತಿ ಚಿಕಿತ್ಸೆ ನೀಡಿದ್ದಾರೆ. ಗಾಯಗೊಂಡಿದ್ದಂತ ಜಾಗಕ್ಕೆ ಡ್ರೆಸ್ಸಿಂಗ್ ಮಾಡಿ, ಹೊಲಿಗೆ ಹಾಕುವ ಬದಲು ಗಾಯಕ್ಕೆ ಫೆವಿಕ್ವಿಕ್ ಹಚ್ಚಿ, ಅದರ ಮೇಲೆ ಬ್ಯಾಂಡೇಜ್ ಟೇಪ್ ಹಚ್ಚಿ ಕಳುಹಿಸಿದಂತ ಆರೋಪ ಕೇಳಿ ಬಂದಿದೆ.
ಬಾಲಕನ ಕೆನ್ನೆಯ ಮೇಲಾದಂತ ಗಾಯಕ್ಕೆ ಸ್ಟಿಚ್ ಬದಲು ಫೆವಿಕ್ವಿಕ್ ಹಾಕಿದ್ದರ ಪರಿಣಾಮ ಬ್ಯಾಂಡೇಜ್ ತೆಗೆಯಲು ಬಾಲಕ ಪರದಾಡುತ್ತಿದ್ದಾರೆ. ಅಲ್ಲದೇ ನರ್ಸ್ ಎಡವಟ್ಟಿನ ವಿರುದ್ಧ ಬಾಲಕನ ಪೋಷಕರು, ಅಡೂರು ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಜನವರಿ 14ರಂದು ನಡೆದಂತ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಇನ್ನೂ ಫೆವಿಕ್ವಿಕ್ ಹಾಕುವ ವಿಡಿಯೋವನ್ನು ಬಾಲಕನ ಪೋಷಕರು ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ. ಈ ಬಗ್ಗೆ ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿಗೆ ದೂರು ನೀಡಿದ್ದಾರೆ. ಅಲ್ಲದೇ ಕಾರಣ ಕೇಳಿ ನರ್ಸ್ ಗೆ ಆರೋಗ್ಯ ರಕ್ಷಾ ಸಮಿತಿ ನೋಟಿಸ್ ನೀಡಿದೆ.
ಇತ್ತ ಸೂಕ್ತ ಕ್ರಮವಹಿಸಬೇಕಿದ್ದಂತ ಹಾವೇರಿ ಡಿಹೆಚ್ಓ ರಾಜೇಶ್ ಸುರಗಿಹಳ್ಳಿ ಅವರು ನರ್ಸ್ ಜ್ಯೋತಿಯವರನ್ನು ಗುತ್ತಲ ತಾಲ್ಲೂಕಿನ ಆರೋಗ್ಯ ಕೇಂದ್ರಕ್ಕೆ ನಿಯೋಜನೆ ಮಾಡಿ ಕೈ ತೊಳೆದುಕೊಂಡಿದ್ದಾರೆ. ಫೆವಿಕ್ವಿಕ್ ಹಾಕಿ ನಿರ್ಲಕ್ಷ್ಯ ತೋರಿದರೂ ನರ್ಸ್ ಜ್ಯೋತಿಯನ್ನು ಅಮಾನತು ಮಾಡಲು ಡಿಹೆಚ್ ಒ ಹಿಂದೇಟು ಏಕೆ ಅಂತ ಸಾರ್ವಜನಿಕರು ಪ್ರಶ್ನಿಸಿದ್ದಾರೆ.
BREAKING: ಕಾಡುಹಂದಿ ಬೇಟೆಗೆ ಇರಿಸಿದ್ದ ನಾಡಬಾಂಬ್ ತಿಂದ ಎಮ್ಮೆ: ಗಾಯಗೊಂಡು ನರಳಿ ನರಳಿ ಸಾವು