ನವದೆಹಲಿ: ಆನ್ಲೈನ್ ಔಷಧ ಮಾರಾಟ (ಇ-ಫಾರ್ಮಸಿ) ವ್ಯವಸ್ಥೆಯನ್ನು ವಿರೋಧಿಸಿ ಆಲ್ ಇಂಡಿಯಾ ಆರ್ಗನೈಸೇಶನ್ ಆಫ್ ಕೆಮಿಸ್ಟ್ಸ್ ಅಂಡ್ ಡ್ರಗ್ಗಿಸ್ಟ್ಸ್ (AIOCD) ಮೇ 20 ರಂದು (ಬುಧವಾರ) ದೇಶವ್ಯಾಪಿ ಫಾರ್ಮಸಿಗಳ ಬಂದ್ಗೆ ಕರೆ ನೀಡಿದೆ. ಆದರೆ, ರೋಗಿಗಳ ಹಿತದೃಷ್ಟಿಯಿಂದ ದೇಶದ ಬಹುತೇಕ ಪ್ರಮುಖ ಮೆಡಿಕಲ್ ಶಾಪ್ಗಳು ಮತ್ತು ಔಷಧಾಲಯಗಳು ಎಂದಿನಂತೆ ತೆರೆದಿರಲಿವೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ ಸೇರಿದಂತೆ ದೇಶದ 12 ರಾಜ್ಯಗಳ ರೀಟೇಲ್ ಫಾರ್ಮಸಿ ಸಂಘಟನೆಗಳು ಈ ಮುಷ್ಕರದಿಂದ ದೂರ ಉಳಿಯಲು ನಿರ್ಧರಿಸಿರುವುದರಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎನ್ನಲಾಗಿದೆ.
ದೇಶದ ಎಲ್ಲಾ ಪ್ರಮುಖ ಫಾರ್ಮಸಿ ಚೈನ್ಗಳು (Pharmacy Chains) ಮತ್ತು ಆಸ್ಪತ್ರೆಗಳಿಗೆ ಹೊಂದಿಕೊಂಡಿರುವ ಮೆಡಿಕಲ್ ಸ್ಟೋರ್ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.ಜನೌಷಧಿ ಕೇಂದ್ರಗಳು (Jan Aushadhi Kendras) ಮತ್ತು ಅಮೃತ್ ಫಾರ್ಮಸಿ (AMRIT Pharmacy) ಮಳಿಗೆಗಳು ಸಂಪೂರ್ಣವಾಗಿ ತೆರೆದಿರಲಿವೆ.
ಕರ್ನಾಟಕ, ಮಹಾರಾಷ್ಟ್ರ, ಕೇರಳ, ಪಶ್ಚಿಮ ಬಂಗಾಳ, ಗುಜರಾತ್, ಪಂಜಾಬ್ ಮತ್ತು ಉತ್ತರ ಪ್ರದೇಶ ಸೇರಿದಂತೆ 12 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಔಷಧ ವ್ಯಾಪಾರಿಗಳ ಸಂಘಗಳು ತಾವು ಮುಷ್ಕರದಲ್ಲಿ ಭಾಗಿಯಾಗುತ್ತಿಲ್ಲ ಎಂದು ಲಿಖಿತ ಭರವಸೆ ನೀಡಿವೆ.








