ಕೊಳವೆ ಬಾವಿಗಳನ್ನು ಕೊರೆಯಲು ಅನುಮತಿ ಪಡೆಯಬೇಕು ಜೊತೆಗೆ ವಿಫಲಗೊಂಡ ಬಾವಿಗಳನ್ನು ಮುಚ್ಚಲು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಲತಾಕುಮಾರಿ ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕರ್ನಾಟಕ ಅಂತರ್ಜಲ ಅಭಿವೃದ್ದಿ ಮತ್ತು ಅತಿ ಬಳಕೆ ನಿಯಂತ್ರಣ ಅಧಿನಿಯಮದಡಿ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸಭೆ ನಡೆಸಿ ಮಾತನಾಡಿದ ಅವರು ವಿಫಲ ಕೊಳವೆ ಬಾವಿಗಳಲ್ಲಿ ಚಿಕ್ಕ ಮಕ್ಕಳು ಬಿದ್ದು ಸಾವಿಗೀಡಾಗುವ ಅವಘಡಗಳನ್ನು ತಪ್ಪಿಸಲು ಮುಂಜಾಗ್ರತೆವಹಿಸಿ ಮಣ್ಣು ಮತ್ತು ಕಲ್ಲುಗಳಿಂದ ಸಂಪೂರ್ಣವಾಗಿ ಮುಚ್ಚಿ ಗಿಡನೆಟ್ಟು ಸುರಕ್ಷಿತವಾಗಿಡಬೇಕು ಎಂದರು.
ಸ್ಥಳೀಯ ಪ್ರಾಧಿಕಾರ (ಗ್ರಾಮ ಪಂಚಾಯಿತಿ/ಪಟ್ಟಣ ಪಂಚಾಯಿತಿ, ಪುರಸಭೆ, ನಗರ ಸಭೆ, ಮಹಾನಗರ ಪಾಲಿಕೆಗಳು) ನಿರಾಪೇಕ್ಷಣಾ ಪತ್ರವನ್ನು ನೀಡುವಾಗ 15 ದಿನ ಮುಂಚಿತವಾಗಿ ಅರ್ಜಿ ಪಡೆದು ಸ್ವೀಕೃತಿ ನೀಡಬೇಕು. ಸಾರ್ವಜನಿಕ ಕುಡಿಯುವ ನೀರಿನ ಮೂಲಗಳಿಂದ 500 ಮೀಟರ್ ದೂರ ಇರುವ ಬಗ್ಗೆ ಪಿ.ಡಿ.ಓ ರವರಿಂದ ದೃಡೀಕರಿಸಿಕೊಳ್ಳಬೇಕು. ಮುಚ್ಚಳಿಕೆ ಪತ್ರ ಪಡೆಯಬೇಕು ಎಂದರು.
ಸಫಲ/ವಿಫಲ ಕೊಳವೆ ಬಾವಿಗಳ ಬಗ್ಗೆ ಮಾಹಿತಿಯನ್ನು ನಿಗಧಿತ ನಮೂನೆಯಲ್ಲಿ ನೊಂದಾಯಿಸತಕ್ಕದ್ದು, ಪ್ರತಿ ತಿಂಗಳ ಮೊದಲನೆ ತಾರೀಖು ತಿಂಗಳ ಕ್ರೂಢಿಕೃತ ಮಾಹಿತಿಯನ್ನು ತಾಲ್ಲೂಕು ಪಂಚಾಯಿತಿಗೆ ಸಲ್ಲಿಸಬೇಕು ಎಂದು ತಿಳಿಸಿದರು.
ತಾಲ್ಲೂಕು ಪಂಚಾಯಿತಿಯು ತಾಲ್ಲೂಕಿನ ಮಾಹಿತಿಯನ್ನು ಕಾರ್ಯ ನಿರ್ವಾಹಕ ಅಭಿಯಂತರರು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ (ನೋಡಲ್ ಅಧಿಕಾರಿ) ಜಿಲ್ಲಾ ಪಂಚಾಯಿತಿ ಇವರಿಗೆ ಕಳುಹಿಸುವುದು. ಅದೇ ರೀತಿ ನಗರ ಸ್ಥಳೀಯ ಪ್ರಾಧಿಕಾರಗಳು ತಿಂಗಳ ಕ್ರೂಡಿಕತ ಮಾಹಿತಿಯನ್ನು ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ ಇವರಿಗೆ ಸಲ್ಲಿಸುವಂತೆ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ, ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ರಾಮಚಂದ್ರ, ಜಿಲ್ಲಾ ಅಂತರ್ಜಲ ಅಭಿವೃದ್ದಿ ಇಲಾಖೆಯ ಹಿರಿಯ ಭೂವಿಜ್ಞಾನಿ ಸುಧಾ ಹಾಗೂ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.