ಬೆಂಗಳೂರು: ಕೋವಿಡ್ ಬಗ್ಗೆ ಜನರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ಆದರೂ ಮುಂಜಾಗರೂಕತಾ ಕ್ರಮಗಳನ್ನು ಅನುಸರಿಸಬೇಕು ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.
ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಕುರಿತು ಆರೋಗ್ಯ ಇಲಾಖೆಯ ಅಧಿಕಾರಿ, ಸಚಿವರನ್ನೊಳಗೊಂಡು ಸಭೆಯನ್ನು ನಡೆಸಿದರು.
ರಾಜ್ಯದಲ್ಲಿ ಮೇ ತಿಂಗಳ ಬಳಿಕ ಕೋವಿಡ್ ಪರೀಕ್ಷೆ ಹೆಚ್ಚಿಸಲಾಗಿದೆ. ಈ ತಿಂಗಳು ಪ್ರತಿ ದಿನ ಸರಾಸರಿ 500 ಪರೀಕ್ಷೆ ನಡೆಸುತ್ತಿದ್ದೇವೆ. ಕಳೆದ 10 ದಿನಗಳಲ್ಲಿ 5ಸಾವಿರ ಪರೀಕ್ಷೆ ನಡೆಸಲಾಗಿದ್ದು, 862 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದುವರೆಗೆ 11ಸಾವು ಸಂಭವಿಸಿದೆ. ಆದರೂ ಇದರಲ್ಲಿ 10 ಪ್ರಕರಣಗಳಲ್ಲಿ ಕೋವಿಡ್ ಕಾರಣದಿಂದ ಸಾವು ಸಂಭವಿಸಿಲ್ಲ. ವಿವಿಧ ರೀತಿಯ ಅನಾರೋಗ್ಯಕ್ಕೆ ತುತ್ತಾಗಿದ್ದ ರೋಗಿಗಳು ಈ ಪ್ರಕರಣಗಳಲ್ಲಿ ಸಾವನ್ನಪ್ಪಿದ್ದಾರೆ. ಒಂದು ಪ್ರಕರಣದ ಆಡಿಟ್ ವರದಿ ಬರಬೇಕಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಕೋವಿಡ್ ಬಗ್ಗೆ ಯಾರೂ ಅನಗತ್ಯ ಗೊಂದಲ ಮೂಡಿಸಬಾರದು. ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ. ಎಲ್ಲಾ ಆಸ್ಪತ್ರೆಗಳಲ್ಲಿ ಕೋವಿಡ್ ಪ್ರಕರಣಗಳನ್ನು ನಿಭಾಯಿಸಲು ಸೂಕ್ತ ವ್ಯವಸ್ಥೆಯನ್ನು ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಅವರು ಸೂಚನೆ ನೀಡಿದರು.
ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಅನಗತ್ಯವಾಗಿ ಕೋವಿಡ್ ಪರೀಕ್ಷೆ ಹೆಸರಿನಲ್ಲಿ ದುಬಾರಿ ಶುಲ್ಕ ವಿಧಿಸುತ್ತಿರುವ ದೂರುಗಳ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಈ ವೇಳೆ ಆರೋಗ್ಯ ಸಚಿವ ಡಾ.ದಿನೇಶ್, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಮುಖ್ಯಮಂತ್ರಿ ಅವರ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕೋವಿಡ್-19 ಉಲ್ಬಣ: ಪ್ರಧಾನಿ ಮೋದಿ ಭೇಟಿ ಮಾಡುವ ಮೊದಲು ಸಚಿವರಿಗೆ RT-PCR ಪರೀಕ್ಷೆ ಕಡ್ಡಾಯ:
BIG NEWS : ಪ್ರಧಾನಿ ಮೋದಿಯಿಂದ ದೇಶದ ಬಡತನ ಕಡಿಮೆಯಾಗಿಲ್ಲ : CM ಸಿದ್ದರಾಮಯ್ಯ ವಾಗ್ದಾಳಿ