ಮಡಿಕೇರಿ : ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯಿಂದ ರಾಷ್ಟ್ರವ್ಯಾಪಿ ಡಿಜಿಟಲ್ ಲೈಫ್ ಸರ್ಟಿಫಿಕೆಟ್ ಅಭಿಯಾನವನ್ನು ನವೆಂಬರ್, 01 ರಿಂದ 30 ರವರೆಗೆ ಹಮ್ಮಿಕೊಂಡಿದ್ದು, ಪಿಂಚಣಿದಾರರು ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಕೊಡಗು ಅಂಚೆ ವಿಭಾಗದ ಅಂಚೆ ಅಧೀಕ್ಷಕರಾದ ಎಸ್.ಪಿ.ರವಿ ಅವರು ಕೋರಿದ್ದಾರೆ.
ಮುಖ ಚಹರೆ ಮತ್ತು ಬೆರಳಚ್ಚು ದೃಡೀಕರಣದ ಡಿಜಿಟಲ್ ಪ್ರಕ್ರಿಯೆ ಮೂಲಕ ಈ ಅಭಿಯಾನ ನಡೆಯಲಿದೆ. ಪಿಂಚಣಿದಾರರು ತಮ್ಮ ಡಿಜಿಟಲ್ ಲೈಫ್ ಪ್ರಮಾಣ ಪತ್ರವನ್ನು ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ಪಿಪಿಒ ಸಂಖ್ಯೆ ಮತ್ತು ಪಿಂಚಣಿದಾರರ ಬ್ಯಾಂಕ್ ಖಾತೆಯ ವಿವರಗಳೊಂದಿಗೆ ತಮ್ಮ ಬಯೋಮೆಟ್ರಿಕ್ ಪರಿಶೀಲಿಸಿ ಸಲ್ಲಿಸಬಹುದು.
ರಾಜ್ಯ ಸರ್ಕಾರದ ಮತ್ತು ಕೇಂದ್ರ ಸರ್ಕಾರದ ಪಿಂಚಣಿದಾರರು, ಕುಟುಂಬ ಪಿಂಚಣಿದಾರರು ತಮ್ಮ ಹತ್ತಿರದ ಅಂಚೆ ಕಚೇರಿಯಲ್ಲಿ ಅಥವಾ ಪೋಸ್ಟ್ ಮೆನ್ ಮೂಲಕ 70 ರೂ. ಶುಲ್ಕ ಪಾವತಿಸಿ, ಈ ಸೌಲಭ್ಯ ಪಡೆದು ತಮ್ಮ ಡಿಜಿಟಲ್ ಲೈಫ್ ಪ್ರಮಾಣ ಪತ್ರ ಸಲ್ಲಿಸುವಂತೆ ಜಿಲ್ಲಾ ಅಂಚೆ ಇಲಾಖೆ ತಿಳಿಸಿದೆ.