ಬೆಂಗಳೂರು : ತುಮಕೂರು ಮುಖ್ಯರಸ್ತೆಯ ಪೀಣ್ಯ ಮೇಲ್ಲೇತುವೆಯಲ್ಲಿ ಜ. 16ರಿಂದ ಮೂರು ದಿನ ತುರ್ತು ದುರಸ್ತಿ ಕಾಮಗಾರಿ ಹಿನ್ನೆಲೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಪೀಣ್ಯ ಮೇಲ್ಲೇತುವೆಯ ವಯಾಡಕ್ಷನ ದುರಸ್ತಿ ಕಾಮಗಾರಿ ಕೈಗೊಳ್ಳಲು ವಾಹನ ಸಂಚಾರ ನಿರ್ಬಂಧಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನಗರ ಸಂಚಾರ ಪೊಲೀಸರನ್ನು ಕೋರಿದ್ದರು. ಹಾಗಾಗಿ, ಜ. 16ರ ರಾತ್ರಿ 11 ಗಂಟೆಯಿಂದ 19ರ ಬೆಳಗ್ಗೆ 11 ಗಂಟೆವರೆಗೆ ಮೇಲೇತುವೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಎಂಟಿಐ ಜಂಕ್ಷನ್ನಿಂದ ನೆಲಮಂಗಲ ಕಡೆಗೆ ಸಾಗುವ ವಾಹನಗಳು: ಪಾರ್ಲೆ-ಜಿ ಟೋಲ್ ತಲುಪಲು ಪ್ರೈಓವರ್ ಪಕ್ಕದ ಎನ್.ಎಚ್.ರಸ್ತೆ ಹಾಗೂ ಸರ್ವೀಸ್ ರಸ್ತೆಯಲ್ಲಿ ಎಸ್ಆರ್ಎಸ್ ಜಂಕ್ಷನ್, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್, ಜಾಲಹಳ್ಳಿ ಕ್ರಾಸ್, 8ನೇ ಮೈಲಿ ಮುಖಾಂತರ ಮುಂದೆ ಹೋಗಲು ಅವಕಾಶ ಮಾಡಿಕೊಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಪರ್ಯಾಯ ಮಾರ್ಗ: ಮೇಲ್ಲೇತುವೆ ಬಂದ್ ಹಿನ್ನೆಲೆಯಲ್ಲಿ ನೆಲಮಂಗಲ ಕಡೆಯಿಂದ ನಗರಕ್ಕೆ ಬರುವ ವಾಹನಗಳು: ಕೆನ್ನಮೆಟಲ್ ವಿಡಿಯಾ ಹತ್ತಿರದ ರಾಷ್ಟ್ರೀಯ ಹೆದ್ದಾರಿ-4ರ ರಸ್ತೆ ಹಾಗೂ ಸರ್ವೀಸ್ ರಸ್ತೆ ಮೂಲಕ ಸಾಗಿ 8ನೇ ಮೈಲಿ, ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್, ಎಸ್ಆರ್ಎಸ್ ಜಂಕ್ಷನ್ ಮೂಲಕ ಗೊರಗುಂಟೆಪಾಳ್ಯ ತಲುಪಿ ಮುಂದೆ ಸಾಗಬಹುದು.