ಶಿವಮೊಗ್ಗ : ಜೋಗದ ಜಲಪಾತ ಸೇರಿದಂತೆ ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲಾಗಿರುವ ಹಾಗೂ ಈವರೆಗೆ ಗುರುತಿಸಲು ಸಾಧ್ಯವಾಗದೇ ಅಜ್ಞಾತವಾಗಿರುವ ಎಲ್ಲಾ ಪ್ರವಾಸಿ ತಾಣಗಳನ್ನು ಜಗತ್ತಿಗೆ ಪರಿಚಯಿಸುವ ಸದುದ್ದೇಶದಿಂದ ಸ್ಥಳೀಯ ಸಂಸ್ಥೆಗಳು, ಆಸಕ್ತರನ್ನೊಳಗೊಂಡು ವಿವಿಧ ಕಾರ್ಯಕ್ರಮಗಳನ್ನು ರೂಪಿಸಿ, ಜನಸಾಮಾನ್ಯರಿಗೆ ಪರಿಚಯಿಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಹೇಳಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಸೆ.22ರಂದು ಆಚರಿಸಲು ಉದ್ದೇಶಿಸಲಾಗಿರುವ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಜನಮನ ಸೆಳೆಯುವ ನಿಟ್ಟಿನಲ್ಲಿ ರೂಪಿಸಿ ಆಯೋಜಿಸಲಾಗುವುದು. ಅದಕ್ಕಾಗಿ ಜಿಲ್ಲೆಯ ಹೋಟೆಲ್ ಮಾಲೀಕರೂ, ಟ್ಯಾಕ್ಸಿ ಮಾಲೀಕರು, ಬಸ್ ಮಾಲೀಕರು, ಯೂಟೂಬರ್ಸ್, ಛಾಯಾಗ್ರಾಕರು, ಸಾಹಸ-ಕ್ರೀಡಾ ಕೇಂದ್ರಗಳ ನಿರ್ವಾಹಕರು, ಮತ್ತಿತರೊಂದಿಗೆ ಹಲವು ಸುತ್ತಿನ ಸಭೆಗಳನ್ನು ನಡೆಸಿ, ಅವರಿಂದ ಅಭಿಪ್ರಾಯ ಸಂಗ್ರಹಿಸಿ, ಜನರ ಸಹಭಾಗಿಗಳಾಗುವಂತೆ ವಿನೂತನ ರೀತಿಯ ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದರು.
ಈಗಾಗಲೇ ಗುರುತಿಸಲಾಗಿರುವ ಸ್ಥಳಗಳಿಗೆ ಪ್ರವಾಸಿಗರು ಹೋಗಿ ಬರಲು ಅನುಕೂಲವಾಗುವಂತೆ ಹಾಗೂ ಪ್ರವಾಸಿ ತಾಣಗಳಿಗೆ ಅಗತ್ಯ ಮೂಲಭೂತ ಸೌಕರ್ಯ, ರಸ್ತೆ ಸಂಚಾರ, ಮಾಹಿತಿಯುಕ್ತ ಪ್ರಚಾರಫಲಕ ಅಳವಡಿಸುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ. ಜಿಲ್ಲೆಯ ಈ ಎಲ್ಲಾ ಪ್ರವಾಸಿ ತಾಣಗಳಿಗೆ ಅಗತ್ಯ ಸೌಕರ್ಯ ಒದಗಿಸಲು ಈಗಾಗಲೇ 120ಕೋಟಿ ರೂ.ಗಳ ಪ್ರಸ್ತಾವನೆ ಸಿದ್ಧಪಡಿಸಲಾಗಿದ್ದು, ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದೆ. ಮಾನ್ಯ ಸಚಿವರು ಜಿಲ್ಲೆಯ ವಿಕಾಸಕ್ಕೆ ಪೂರಕವಾಗಿ ಈ ಯೋಜನೆಗೆ ಸರ್ಕಾರದಿಂದ ಅನುದಾನ ಕೊಡಿಸುವ ಭರವಸೆ ನೀಡಿದ್ದಾರೆ ಎಂದವರು ನುಡಿದರು.
ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಉನ್ನತಿಗೆ ವಿಫುಲ ಅವಕಾಶಗಳಿರುವುದನ್ನು ಗಮನಿಸಲಾಗಿದೆ. ರಾಜ್ಯದ ಇತರೆ ಪ್ರವಾಸಿ ಕ್ಷೇತ್ರಗಳಂತೆ ಜಿಲ್ಲೆಯನ್ನು ರೂಪಿಸಬೇಕಾದ ಅಗತ್ಯವಿದೆ. ಇದರಿಂದಾಗಿ ವಿಶ್ವದ ಭೂಪಟದಲ್ಲಿ ಜಿಲ್ಲೆಯ ಮಹತ್ವದ ವಿಷಯಗಳ ಮೇಲೆ ಬೆಳಕು ಚೆಲ್ಲಬಹುದಾಗಿದೆ. ಅಲ್ಲದೇ ಇಲ್ಲಿನ ಜನರ ಜೀವನ ಗುಣಮಟ್ಟದ ಸುಧಾರಣೆ ಕಂಡುಕೊಳ್ಳಬಹುದಾಗಿದೆ ಎಂದರು.
ರಾಜ್ಯದ ಹೃದಯಭಾಗದಲ್ಲಿರುವ ಶಿವಮೊಗ್ಗ ಜಿಲ್ಲೆ ನೈಸರ್ಗಿಕ ಸೌಂದರ್ಯ, ಸಾಂಸ್ಕೃತಿಕ ಪರಂಪರೆ ಮತ್ತು ಕ್ರೀಡೆ-ಸಾಹಸಕ್ಕೆ ಮಹತ್ವ ಪಡೆದುಕೊಂಡಿದೆ. ವಿಶ್ವವಿಖ್ಯಾತ ಜೋಗ-ಜಲಪಾತದಿಂದ ಆಗುಂಬೆಯ ಸೂರ್ಯಾಸ್ತದವರೆಗಿನ ಅನೇಕ ವಿಷಯಗಳಿಗೆ ಸದಾ ಜೀವಂತವಾಗಿದೆ. ಇಲ್ಲಿನ ಹಲವು ಉಸಿರು ಬಿಗಿಹಿಡಿಯುವ ಕಡಿದಾದ ಕಣಿವೆಗಳು, ಮೈಜುಮ್ಮೆನಿಸುವಂತ ದೃಶ್ಯಗಳು, ರೋಮಾಂಚಕ ಸಾಹಸ-ಕ್ರೀಡೆಗಳಿಗೆ ಜಿಲ್ಲೆ ಸದಾ ನೆನಪಿನಲ್ಲಿ ಉಳಿಯಲಿದೆ. ಇಲ್ಲಿನ ಪ್ರವಾಸಿ ತಾಣಗಳು, ಮಂದಿರ-ಮಸೀದಿ-ಚರ್ಚುಗಳು, ಐತಿಹಾಸಿಕ ಸ್ಥಳಗಳು, ಕವಿ-ಕಲಾವಿದರು, ಸಾಹಿತ್ಯ, ನೃತ್ಯ ಸಂಗೀತ ಕ್ಷೇತ್ರದ ಸಾಧಕರು, ನದಿ-ನಾಲೆ-ಜಲಪಾತಗಳು, ತಪ್ಪಲು ಪ್ರದೇಶಗಳು ಮತ್ತಿತರ ವಿವರಗಳನ್ನು ಸಚಿತ್ರವಾಗಿ ಸಾಮಾಜಿಕ ಜಾಲತಾಣಗಳು ಮತ್ತಿತರ ಪ್ರಸಾರ ಮಾಧ್ಯಮಗಳನ್ನು ಬಳಸಿಕೊಂಡು ಜಗತ್ತಿನಾದ್ಯಂತ ಜಿಲ್ಲೆಯನ್ನು ಪರಿಚಯಿಸಲು ಉದ್ದೇಶಿಸಲಾಗಿದೆ. ಅದಕ್ಕಾಗಿ ಜಿಲ್ಲೆಯ ವೆಬ್‌ಸೈಟನ್ನು ವಿನ್ಯಾಸಗೊಳಿಸಿ, ಸೆಪ್ಟಂಬರ್ 22ರಂದು ಲೋಕಾರ್ಪಣೆಗೊಳಿಸಲಾಗುವುದು ಎಂದರು.
ಜಿಲ್ಲೆಯಾದ್ಯಂತ ಈಗಾಗಲೇ ಗುರುತಿಸಲಾಗಿರುವ 60ಕ್ಕೂ ಹೆಚ್ಚಿನ ಸ್ಥಳಗಳಲ್ಲಿ ಪ್ರಚಾರ ಫಲಕ, ಕಿರುಮಾಹಿತಿ, ಮಾರ್ಗಗಳ ವಿವರಗಳನ್ನು ಅಳವಡಿಸಲಾಗುವುದು. ಜಿಲ್ಲೆಯ ಅಧಿಕೃತ, ನಂಬಿಕಾರ್ಹ, ಮಾಹಿತಿಯುಕ್ತ ವೆಬ್‌ಸೈಟ್‌ನ್ನು ಆರಂಭಿಸಿ, ಜಿಲ್ಲೆಯ ಛಾಯಾಚಿತ್ರ ಸಹಿತ ಸಮಗ್ರ ಮಾಹಿತಿ, ಐತಿಹಾಸಿಕ ಸ್ಥಳಗಳು, ಸ್ಥಳ ಐತಿಹ್ಯಗಳು, ವ್ಯಕ್ತಿಚಿತ್ರಗಳು, ವನ್ಯಜೀವಿಗಳು, ಸ್ಟೇಹೋಂ, ವಸತಿ ಗೃಹಗಳು, ಊಟೋಪಹಾರ, ಮತ್ತಿತರ ವಿಶೇಷತೆಗಳು, ನದಿ-ನಾಲೆ ಜಲಪಾತಗಳು, ತಪ್ಪಲು ಪ್ರದೇಶಗಳು, ಸ್ಥಳದಿಂದ ಸ್ಥಳಕ್ಕೆ ಇರುವ ದೂರ, ಕಾಲಮಾನಕ್ಕನುಗುಣವಾಗಿ ಬದಲಾಗುವ ವಿಶೇಷಗಳನ್ನೊಳಗೊಂಡಂತೆ ಮಾಹಿತಿಯನ್ನು ಒದಗಿಸಲಾಗುವುದು ಎಂದ ಅವರು, ಈ ಜಾಲತಾಣದಲ್ಲಿ ಅತ್ಯಪರೂಪದ ಜಿಲ್ಲೆಯ ವಿಶೇಷಗಳಿರುವ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗುವುದು . ಸ್ಪರ್ಧೆಗೆ ಬಂದ ಆಯ್ದ ಉತ್ತಮ ಛಾಯಾಚಿತ್ರಗಳನ್ನು ವೆಬ್‌ಸೈಟ್‌ಗೆ ಬಳಸಿಕೊಳ್ಳಲಾಗುವುದು ಎಂದರು. ಅಲ್ಲದೇ ಜನಸಾಮಾನ್ಯರಿಗೆ ಪರಿಚಯಾತ್ಮಕ ಹಾಗೂ ಕ್ಷಣಾರ್ಧದಲ್ಲಿ ಮಾಹಿತಿ ಒದಗಿಸುವ ಕಾಫೀ ಟೇಬಲ್‌ಬುಕ್‌ನ್ನು ಪ್ರಕಟಿಸಲಾಗುವುದು ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್‌ಅವರು ಮಾತನಾಡಿ, ವಿವಿಧ ವಿಭಾಗಗಳಲ್ಲಿ ಆಯೋಜಿಸಲಾಗುವ ಸ್ಪರ್ಧೆಗಳನ್ನು ಸೆಪ್ಟಂಬರ್‌ರೊಳಗಾಗಿ ಪೂರ್ಣಗೊಳಿಸಲಾಗುವುದು.
ಸ್ಪರ್ಧೆಗಳಲ್ಲಿ ಭಾಗವಹಿಸುವವರು ಆನ್‌ಲೈನ್ ಮೂಲಕ ಆಗಸ್ಟ್ 11 ರಿಂದ 20ರೊಳಗಾಗಿ ನೋಂದಾಯಿಸಿಕೊಳ್ಳಬೇಕು. ನೋಂದಾಯಿಸಿದ ಸ್ಪರ್ಧಿಗಳಿಗೆ ಗುರುತಿನ ಚೀಟಿ ನೀಡಲಾಗುವುದು. ಸಮಿತಿಯ ನಿರ್ಣಯದಂತೆ ಸ್ಪರ್ಧೆಗಳ ವಿಜೇತರನ್ನು ಆಯ್ಕೆ ಮಾಡಲಾಗುವುದು ಎಂದರು.
65,000 ರೂಪಾಯಿಯವರೆಗೆ ಬಹುಮಾನ ಗೆಲ್ಲಿ
ವಿಡಿಯೋಗ್ರಫಿ ಸ್ಪರ್ಧೆ: ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮೊದಲ ಬಹುಮಾನ 40,000/-, ದ್ವಿತೀಯ ಬಹುಮಾನ 30,000/- ಹಾಗೂ ತೃತೀಯ ಬಹುಮಾನ 20,000/-ರೂ.ಗಳ ನಗದು ಬಹುಮಾನ ನೀಡಲಾಗುವುದು. ಅಲ್ಲದೇ 25,000/-ರೂ.ಗಳ ವಿಶೇಷ ಬಹುಮಾನ ನೀಡಲಾಗುವುದು.
ಫೋಟೋಗ್ರಫಿ ಸ್ಪರ್ಧೆ ಮತ್ತು ರೀಲ್ಸ್‌ಸ್ಪರ್ಧೆ : ಪ್ರತ್ಯೇಕವಾಗಿರುವ ಈ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಅನುಕ್ರಮವಾಗಿ 8,000/-, 5,000/- ಮತ್ತು 3,000/-ರೂ.ಗಳ ನಗದು ಪುರಸ್ಕಾರ ನೀಡಲಾಗುವುದು. ಅಲ್ಲದೇ 10,000/-ರೂ.ಗಳ ವಿಶೇಷ ಬಹುಮಾನ ನೀಡಲಾಗುವುದು.
ಲಾಂಛನ ವಿನ್ಯಾಸ ಸ್ಪರ್ಧೆ(LOGO) : ಜಿಲ್ಲೆಯ ಮಹತ್ವದ ಹಲವು ವಿಶೇಷತೆಗಳನ್ನು ಬಿಂಬಿಸುವಂತೆ ಅತ್ಯುತ್ತಮ ರೀತಿಯಲ್ಲಿ ಲಾಂಛನ ವಿನ್ಯಾಸಗೊಳಿಸುವ ವಿನ್ಯಾಸಕಾರರಿಗೆ 30,000/-ರೂ.ಗಳ ಬಹುಮಾನ ನೀಡಲಾಗುವುದು.
ಘೋಷವಾಕ್ಯ ಸ್ಪರ್ಧೆ (TAGLINE) : ಜಿಲ್ಲೆಯಲ್ಲಿನ ಪ್ರವಾಸಿ ತಾಣಗಳನ್ನು ಜಗತ್ತಿಗೆ ಪರಿಚಯಿಸುವ ನಿಟ್ಟಿನಲ್ಲಿ, ಎಲ್ಲರನ್ನೂ ಆಕರ್ಷಿಸುವ ರೀತಿಯಲ್ಲಿ ಜಿಲ್ಲೆಯನ್ನು ಇಲ್ಲಿನ ಮಹತ್ವಗಳನ್ನು ಪರಿಚಯಿಸುವ ಹಾಗೆ ಘೋಷವಾಕ್ಯ ರಚಿಸುವ ಓರ್ವರಿಗೆ ರೂ.5,000/-ಗಳ ನಗದು ಬಹುಮಾನ ನೀಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಧರ್ಮಪ್ಪ, ಶೇಖರ್ ಗೌಳೇರ್ ಮತ್ತಿತರರು ಉಪಸ್ಥಿತರಿದ್ದರು.
ಅಪಘಾತದಲ್ಲಿ ಸಾಗರದ ಯೋಧ ಪ್ರಜ್ವಲ್ ದುರ್ಮರಣ: ಶಾಸಕ ಗೋಪಾಲಕೃಷ್ಣ ಬೇಳೂರು ಅಂತಿಮ ನಮನ ಸಲ್ಲಿಕೆ
ಬೆಂಗಳೂರಲ್ಲಿ ಮರದ ಕೊಂಬೆ ಮುರಿದು ವೃದ್ಧನ ಸೊಂಟದ ಮೂಳೆ ಮುರಿತ : ‘BBMP’ ಸಿಬ್ಬಂದಿ ವಿರುದ್ಧ ‘FIR’ ದಾಖಲು