ಬೆಂಗಳೂರು: ಪರೇಶ್ ಮೇಸ್ತ ಸಾವಿಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಸಿಬಿಐ ವರದಿಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗವಾಗಿದ್ದು, ಪರಮೇಶ್ ಮೇಸ್ತ ಸಾವು ಆಕಸ್ಮಿಕ ಅಂತ ಸಿಬಿಐ ಕೋರ್ಟ್ಗೆ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಈ ಹಿನ್ನೆಲೆ ಪರೇಶ್ ಮೇಸ್ತ ತಂದೆ ಪ್ರತಿಕ್ರಿಯೆ ನೀಡಿದ್ದು, ನನ್ನ ಮಗ ಸಹಜವಾಗಿ ಸಾವನ್ನಪ್ಪಿಲ್ಲ, ಆತನನ್ನು ಕೊಲೆ ಮಾಡಲಾಗಿದೆ. ಪೊಲೀಸರು ಸರಿಯಾಗಿ ಕೆಲಸ ಮಾಡಿಲ್ಲ ಎಂದು ಮೇಸ್ತ ತಂದೆ ಕಮಲಾಕರ ಬೇಸರ ವ್ಯಕ್ತಪಡಿಸಿದ್ದಾರೆ. ಸಿಬಿಐ ಅಧಿಕಾರಿಗಳು ಸರಿಯಾಗಿ ತನಿಖೆ ನಡೆಸಿ ನಮಗೆ ನ್ಯಾಯ ಒದಗಿಸುತ್ತಾರೆ ಎಂದು ಅಂದುಕೊಂಡಿದ್ದೆ, ಆದರೆ ಈಗ ಅಸಹಜ ಸಾವು ಅಂತಿದ್ದಾರೆ. ಅಂದಿನ ಪೊಲೀಸ್ ಇಲಾಖೆ, ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಿಲ್ಲ, ಸಾಕ್ಷಿ ನಾಶ ಮಾಡಿದ್ದಾರೆ. ಮುಖಂಡರು, ಜನರ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಪರೇಶ್ ಮೇಸ್ತ ತಂದೆ ಕಮಲಾಕರ ಹೇಳಿದ್ದಾರೆ.
ಕಳೆದ ಐದು ವರ್ಷಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಪರೇಶ್ ಮೇಸ್ತಾ ಸಾವಿಗೆ ಸಂಬಂಧಪಟ್ಟಂತೆ ಆಗ ಕರಾವಳಿ ಭಾಗದಲ್ಲಿ ದೊಡ್ಡ ಬಿರುಗಾಳಿಯನ್ನು ಹಬ್ಬಿಸಿತ್ತು, ಇದಲ್ಲದೇ ಕೆಲ ರಾಜಕೀಯ ಪಾರ್ಟಿಗಳು ಇದನ್ನೇ ಬಂಡವಾಳ ಮಾಡಿಕೊಂಡು ಕೋಮು ಸೌಹರ್ದತೆಗೆ ದಕ್ಕೆ ತಂದಿದ್ದವು ಕೂಡ, ಇವೆಲ್ಲದರ ನಡುವೆ ಆಗಿನಸ ಸಿಎಂ ಸಿದ್ದರಾಮಯ್ಯ ಅವರು ಇದನ್ನು ಸಿಬಿಐಗೆ ಒಪ್ಪಿಸಿದ್ದರು. ಈಗ ಪರೇಶ್ ಮೇಸ್ತಾ ಸಾವಿನ ಪ್ರಕರಣದಲ್ಲಿ ಸಿಬಿಐ ‘ಬಿ’ ರಿಪೋರ್ಟ್ (B Report) ಸಲ್ಲಿಸಿದೆ ಎನ್ನಲಾಗಿದೆ.
ಪ್ರಕರಣದ ಹಿನ್ನಲೆ:
2017ರ ಡಿಸೆಂಬರ್ 6ರಂದು ಹೊನ್ನಾವರದ ಮೀನುಗಾರ ಪರಮೇಶ್ ಮೇಸ್ತ ನಾಪತ್ತೆಯಾಗಿದ್ದ. ಇದಲ್ಲದೆ, ಡಿಸೆಂಬರ್ 8 ರಂದು ಹೊನ್ನಾವರ ನಗರದ ಶನಿ ದೇವಾಸ್ಥಾನದ ಹಿಂಭಾಗದ ಹಟ್ಟಿ ಕೆರೆಯಲ್ಲಿ ಶವ ಪತ್ತೆಯಾಗಿತ್ತು. ಇದು ಪಟ್ಟಣದಲ್ಲಿ ಉದ್ವಿಗ್ನ ವಾತಾವರಣವನ್ನು ಸೃಷ್ಟಿಸಿತು. 2017 ಡಿಸೆಂಬರ್ 11 ರಂದು ಮೇಸ್ತಾ ಅವರನ್ನು ಕೊಲ್ಲಲಾಯಿತು ಎಂಬ ಆರೋಪ ಕೇಳಿಬಂತು. ಕಾರವಾರ, ಹೊನ್ನಾವರ, ಕುಮಟಾ, ಮುಂಡಗೋಡದಲ್ಲಿ ಹಿಂದೂಪರ ಸಂಘಟನೆಗಳು ಬಂದ್ ಗೆ ಕರೆ ನೀಡಿದ್ದವು. ಕುಮಟಾದಲ್ಲಿ ಹಿಂದೂಪರ ಸಂಘಟನೆಗಳ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತು. ಐಜಿಪಿ ಅವರ ಕಾರಿಗೆ ಬೆಂಕಿ ಹಚ್ಚಲಾಯಿತು. ಪೊಲೀಸರ ಮೇಲೆ ಕಲ್ಲು ತೂರಾಟ ನಡೆಯಿತು. ಪೊಲೀಸರಿಗೆ ಗಾಯಗಳಾಗಿದ್ದವು, ವಾಹನಗಳು ಜಖಂಗೊಂಡಿದ್ದವು.
ಪರೇಶ್ ಮೇಸ್ತಾ ಅವರ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸಲಾಗುವುದು ಎಂದು ಅಂದಿನ ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು. ವಿರೋಧ ಪಕ್ಷಗಳ ಹೋರಾಟಕ್ಕೆ ಮಣಿದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿಲ್ಲ. ಪೋಷಕರ ಒತ್ತಾಯದ ಮೇರೆಗೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು. ಈ ಪ್ರಕರಣದಲ್ಲಿ ಐವರನ್ನು ಬಂಧಿಸಲಾಗಿದೆ. ನಾಲ್ಕೂವರೆ ವರ್ಷಗಳ ಕಾಲ ತನಿಖೆ ನಡೆಸಿದ ನಂತರ ಸಿಬಿಐ ತನ್ನ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.