ಕರಾಚಿ: ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವ ಪಾಕಿಸ್ತಾನವು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ (UAE) ಪಾವತಿಸಬೇಕಿರುವ ಒಟ್ಟು 3.5 ಬಿಲಿಯನ್ ಡಾಲರ್ ಸಾಲದ ಪೈಕಿ ಉಳಿದಿರುವ 1.5 ಬಿಲಿಯನ್ ಡಾಲರ್ (ಸುಮಾರು ₹12,500 ಕೋಟಿ) ಮೊತ್ತವನ್ನು ಏಪ್ರಿಲ್ 23ರ ಒಳಗಾಗಿ ಮರುಪಾವತಿ ಮಾಡುವುದಾಗಿ ಘೋಷಿಸಿದೆ.
ಪಾಕಿಸ್ತಾನದ ಕೇಂದ್ರ ಬ್ಯಾಂಕ್ (SBP) ಈಗಾಗಲೇ ಯುಎಇಗೆ 2 ಬಿಲಿಯನ್ ಡಾಲರ್ ಹಣವನ್ನು ಪಾವತಿಸಿದೆ. ಈಗ ಬಾಕಿ ಉಳಿದಿರುವ 1.5 ಬಿಲಿಯನ್ ಡಾಲರ್ ಹಣವನ್ನು ನಿಗದಿತ ಗಡುವು ಅಂದರೆ ಏಪ್ರಿಲ್ 23ರೊಳಗೆ ಹಿಂದಿರುಗಿಸಬೇಕಿದೆ.
ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ (IMF) ಬರಬೇಕಿರುವ 1.2 ಬಿಲಿಯನ್ ಡಾಲರ್ ನೆರವಿನ ನಿರೀಕ್ಷೆಯಲ್ಲಿರುವ ಪಾಕಿಸ್ತಾನಕ್ಕೆ, ಈ ಸಾಲ ಮರುಪಾವತಿಯು ಅನಿವಾರ್ಯವಾಗಿದೆ.
ಇತ್ತೀಚೆಗಷ್ಟೇ ಸೌದಿ ಅರೇಬಿಯಾವು ಪಾಕಿಸ್ತಾನದ ಕೇಂದ್ರ ಬ್ಯಾಂಕ್‌ನಲ್ಲಿ 2 ಬಿಲಿಯನ್ ಡಾಲರ್ ಹಣವನ್ನು ಠೇವಣಿ ಇರಿಸಿದ್ದು, ಇದು ಯುಎಇ ಸಾಲ ತೀರಿಸಲು ಪಾಕಿಸ್ತಾನಕ್ಕೆ ತುಸು ನೆರವಾಗಿದೆ.ಈ ಭಾರಿ ಮೊತ್ತದ ಸಾಲ ಮರುಪಾವತಿಯಿಂದಾಗಿ ಪಾಕಿಸ್ತಾನದ ವಿದೇಶಿ ವಿನಿಮಯ ಮೀಸಲು ಸಂಗ್ರಹವು ಮತ್ತೆ ಕುಸಿಯುವ ಭೀತಿ ಎದುರಾಗಿದೆ.








