ಪೆಶಾವರ್: ಪಾಕಿಸ್ತಾನದ ವಾಯವ್ಯ ಪ್ರಾಂತ್ಯದ ಖೈಬರ್ ಪಖ್ತುನ್ಖ್ವಾದ ಬನ್ನು ಜಿಲ್ಲೆಯಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಭೀಕರ ಕಾರ್ ಬಾಂಬ್ ಸ್ಫೋಟ ಮತ್ತು ಉಗ್ರರ ದಾಳಿಗೆ ಕನಿಷ್ಠ ಮೂವರು ಪೊಲೀಸ್ ಅಧಿಕಾರಿಗಳು ಬಲಿಯಾಗಿದ್ದಾರೆ. ಈ ಭೀಕರ ದಾಳಿಯಿಂದಾಗಿ ಪೊಲೀಸ್ ಚೌಕಿ ಸಂಪೂರ್ಣ ಧ್ವಂಸವಾಗಿದ್ದು, ಹಲವರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಆತಂಕ ವ್ಯಕ್ತವಾಗಿದೆ.
ಸ್ಫೋಟಕಗಳನ್ನು ತುಂಬಿದ್ದ ಕಾರನ್ನು ಪೊಲೀಸ್ ಚೌಕಿಯ ಬಳಿ ತಂದು ಉಗ್ರರು ಸ್ಫೋಟಿಸಿದ್ದಾರೆ. ಸ್ಫೋಟದ ತೀವ್ರತೆಗೆ ಹತ್ತಿರದ ಮನೆಗಳು ಮತ್ತು ಭದ್ರತಾ ಕಟ್ಟಡಗಳು ಕುಸಿದು ಬಿದ್ದಿವೆ.
ಸ್ಫೋಟದ ಬೆನ್ನಲ್ಲೇ ಸ್ಥಳಕ್ಕೆ ಧಾವಿಸುತ್ತಿದ್ದ ಪೊಲೀಸ್ ತಂಡದ ಮೇಲೆ ಉಗ್ರರು ಹೊಂಚು ಹಾಕಿ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಉಗ್ರರು ಡ್ರೋನ್‌ಗಳನ್ನು ಕೂಡ ಬಳಸಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಹೊರಬಂದಿದೆ.
ಘಟನಾ ಸ್ಥಳದಲ್ಲಿ 15ಕ್ಕೂ ಹೆಚ್ಚು ಅಧಿಕಾರಿಗಳು ಕರ್ತವ್ಯದಲ್ಲಿದ್ದರು ಎನ್ನಲಾಗಿದ್ದು, ಸಾವಿನ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಸಜ್ಜಾದ್ ಖಾನ್ ತಿಳಿಸಿದ್ದಾರೆ.








