ವಾಷಿಂಗ್ಟನ್: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಮಿತಿಮೀರಿರುವ ಬೆನ್ನಲ್ಲೇ, ಪಾಕಿಸ್ತಾನ ಮತ್ತು ಇರಾನ್ ನಡುವಿನ ರಕ್ಷಣಾತ್ಮಕ ಸಂಬಂಧ ಹೊಸ ತಿರುವು ಪಡೆದಿದೆ. ಅಮೆರಿಕ ತನ್ನ ಮೇಲೆ ಯಾವುದೇ ಕ್ಷಣದಲ್ಲಿ ವೈಮಾನಿಕ ದಾಳಿ ನಡೆಸಬಹುದು ಎಂಬ ಭೀತಿಯಲ್ಲಿರುವ ಇರಾನ್, ತನ್ನ ಯುದ್ಧ ವಿಮಾನಗಳನ್ನು ಸುರಕ್ಷಿತವಾಗಿರಿಸಲು ಪಾಕಿಸ್ತಾನದ ವಾಯುನೆಲೆಗಳನ್ನು ಬಳಸಿಕೊಳ್ಳುತ್ತಿದೆ ಎಂಬ ಆಘಾತಕಾರಿ ವರದಿ ಹೊರಬಿದ್ದಿದೆ.
ಇರಾನ್ ತನ್ನ ಪ್ರಮುಖ ವಾಯುಪಡೆಯ ವಿಮಾನಗಳು ಮತ್ತು ಡ್ರೋನ್‌ಗಳನ್ನು ಅಮೆರಿಕದ ಕ್ಷಿಪಣಿ ವ್ಯಾಪ್ತಿಯಿಂದ ದೂರವಿಡಲು ಪಾಕಿಸ್ತಾನದ ಬಲೂಚಿಸ್ತಾನ್ ಮತ್ತು ಸಿಂಧ್ ಪ್ರಾಂತ್ಯದ ವಾಯುನೆಲೆಗಳಲ್ಲಿ ನಿಲುಗಡೆ ಮಾಡಲು ಪಾಕ್ ಸೇನೆ ಅನುಮತಿ ನೀಡಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ರಹಸ್ಯ ಕಾರ್ಯಾಚರಣೆ: ಕಳೆದ 48 ಗಂಟೆಗಳಲ್ಲಿ ಇರಾನ್‌ನ ಹಲವಾರು ಸರಕು ಸಾಗಣೆ ಮತ್ತು ಯುದ್ಧ ವಿಮಾನಗಳು ಪಾಕಿಸ್ತಾನದ ಗಡಿ ದಾಟಿರುವ ದೃಶ್ಯಗಳು ಉಪಗ್ರಹ ಚಿತ್ರಗಳಲ್ಲಿ ಸೆರೆಯಾಗಿವೆ ಎನ್ನಲಾಗಿದೆ.
ಪಾಕಿಸ್ತಾನದ ಈ ಕ್ರಮವು ಅಮೆರಿಕದ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆಯಿದೆ. ಅಮೆರಿಕದ ಮಿತ್ರರಾಷ್ಟ್ರವೆಂದು ಕರೆಸಿಕೊಳ್ಳುವ ಪಾಕಿಸ್ತಾನ, ಈಗ ಇರಾನ್‌ಗೆ ಈ ರೀತಿ ಬೆಂಬಲ ನೀಡುತ್ತಿರುವುದು ವಾಷಿಂಗ್ಟನ್ ವಲಯದಲ್ಲಿ ಆತಂಕ ಮೂಡಿಸಿದೆ.
ತಜ್ಞರ ಪ್ರಕಾರ, ಪಾಕಿಸ್ತಾನವು ಇತ್ತೀಚಿನ ವರ್ಷಗಳಲ್ಲಿ ಅಮೆರಿಕದೊಂದಿಗಿನ ಸಂಬಂಧ ಹಳಸಿಕೊಂಡ ನಂತರ ಚೀನಾ ಮತ್ತು ಇರಾನ್ ಕಡೆಗೆ ಹೆಚ್ಚು ಒಲವು ತೋರುತ್ತಿದೆ. ಅಲ್ಲದೆ, ಪ್ರಾದೇಶಿಕ ಭದ್ರತೆಯ ನೆಪದಲ್ಲಿ ಇರಾನ್‌ನೊಂದಿಗೆ ಒಪ್ಪಂದ ಮಾಡಿಕೊಂಡಿರುವ ಪಾಕಿಸ್ತಾನ, ಅಮೆರಿಕದ ವಿರುದ್ಧ ಒಂದು ರೀತಿಯ ‘ಪರೋಕ್ಷ ಪ್ರತಿರೋಧ’ ತೋರುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇರಾನ್‌ಗೆ ಯಾವುದೇ ರೀತಿಯಲ್ಲಿ ಮಿಲಿಟರಿ ನೆರವು ನೀಡುವ ಅಥವಾ ಅಡಗುತಾಣ ಒದಗಿಸುವ ರಾಷ್ಟ್ರಗಳು ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಈಗಾಗಲೇ ಎಚ್ಚರಿಕೆ ನೀಡಿದೆ. ಪಾಕಿಸ್ತಾನದ ಈ ‘ಏರ್‌ಬೇಸ್ ಪಾರ್ಕಿಂಗ್’ ನಿರ್ಧಾರವು ಆ ದೇಶದ ಮೇಲೆ ಹೊಸ ಆರ್ಥಿಕ ನಿರ್ಬಂಧಗಳನ್ನು ಹೇರಲು ಕಾರಣವಾಗಬಹುದು ಎಂದು ಹೇಳಲಾಗುತ್ತಿದೆ.








