ಬಳ್ಳಾರಿ : ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಸುಮನ್ ಪನ್ನೇಕರ್ ಅವರ ಗನ್‌ಮ್ಯಾನ್ ದೇವರಾಜ್ ಹಾಗೂ ಇತರ ಇಬ್ಬರನ್ನು ಅಕ್ರಮವಾಗಿ ಹಣ ವಸೂಲಿ ಮಾಡಿದ ಆರೋಪದ ಮೇಲೆ ಮೋಕಾ ಪೊಲೀಸರು ಬಂಧಿಸಿದ್ದಾರೆ. ಪಡಿತರ ಅಕ್ಕಿ ಸಾಗಣೆದಾರನೊಬ್ಬನಿಗೆ ಬೆದರಿಕೆ ಹಾಕಿ ಲಕ್ಷಾಂತರ ರೂಪಾಯಿ ಹಣ ಪಡೆದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಘಟನೆಯ ಹಿನ್ನೆಲೆ
ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಶರಬಯ್ಯ ಎಂಬಾತನ ಲಾರಿಗಳನ್ನು ತಡೆದ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ. ಅಕ್ರಮವಾಗಿ ಅಕ್ಕಿ ತುಂಬಿದ ಎರಡು ಲಾರಿಗಳು ಬಳ್ಳಾರಿಯಿಂದ ಆಂಧ್ರಪ್ರದೇಶಕ್ಕೆ ತೆರಳುತ್ತಿದ್ದವು. ಈ ವೇಳೆ ಮಾರ್ಗಮಧ್ಯೆ ಲಾರಿಗಳನ್ನು ಅಡ್ಡಗಟ್ಟಿದ ಗನ್‌ಮ್ಯಾನ್ ದೇವರಾಜ್ ಮತ್ತು ತಂಡ, ತಾವು ‘ಎಸ್‌ಪಿ ಸ್ಕ್ವಾಡ್’ (SP Squad) ನಿಂದ ಬಂದಿರುವುದಾಗಿ ನಂಬಿಸಿದ್ದರು.
ಲಕ್ಷಾಂತರ ರೂಪಾಯಿ ವಸೂಲಿ
ಅಕ್ರಮ ಅಕ್ಕಿ ಸಾಗಾಟದ ಪ್ರಕರಣ ದಾಖಲಿಸದಂತೆ ಇರಲು ಆರೋಪಿಗಳು ಮೊದಲು 5 ಲಕ್ಷ ರೂಪಾಯಿಗಳಿಗೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಸುದೀರ್ಘ ಚೌಕಾಶಿ ನಡೆಸಿದ ನಂತರ, ಅಂತಿಮವಾಗಿ 3 ಲಕ್ಷ ರೂಪಾಯಿಗಳನ್ನು ಪಡೆದುಕೊಂಡು ಲಾರಿಗಳನ್ನು ಬಿಟ್ಟು ಕಳುಹಿಸಿದ್ದರು. ಪೊಲೀಸರ ಹೆಸರಿನಲ್ಲಿಯೇ ಈ ಸುಲಿಗೆ ನಡೆದಿರುವುದು ಇಲಾಖೆಗೆ ಮುಜುಗರ ಉಂಟುಮಾಡಿದೆ.
ದೂರು ಮತ್ತು ತನಿಖೆ
ಹಣ ನೀಡಿದ ನಂತರ ಪಡಿತರ ಅಕ್ಕಿ ಸಾಗಣೆದಾರ ಶರಭಯ್ಯ ಈ ಕುರಿತು ಮೋಕಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಪ್ರಕರಣದ ಗಂಭೀರತೆಯನ್ನು ಅರಿತ ಹಿರಿಯ ಅಧಿಕಾರಿಗಳು ತಕ್ಷಣ ತನಿಖೆಗೆ ಆದೇಶಿಸಿದ್ದು, ಪ್ರಾಥಮಿಕ ತನಿಖೆಯಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಗನ್‌ಮ್ಯಾನ್ ದೇವರಾಜ್ ಮತ್ತು ಆತನಿಗೆ ಸಹಕರಿಸಿದ ಮತ್ತಿಬ್ಬರನ್ನು ಪೊಲೀಸರು ಜೈಲಿಗಟ್ಟಿದ್ದಾರೆ.








